ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ

ಉತ್ತರ ಕನ್ನಡ: ಜಿಲ್ಲೆಯಲ್ಲಿ ಉತ್ತಮ ಸಾಧನೆಗೈದ ಸಾಧಕರಿಗೆ ಕಿಟ್​ ವಿತರಣಾ ಕಾರ್ಯಕ್ರಮ ಸಿದ್ಧಾಪುರದ ತಾಲೂಕು ಪಂಚಾಯತ್​ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕಾಗೇರಿ, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಿದ ಸಿದ್ದಾಪುರ ತಾಲೂಕು 202 ಶೈಕ್ಷಣಿಕ ಬ್ಲಾಕ್​ಗಳಲ್ಲಿ 4ನೇ ಸ್ಥಾನ ಪಡೆದಿದೆ. ಆದ್ದರಿಂದ ತಾಲೂಕಿಗೆ ಪ್ರಥಮ ಸ್ಥಾನ ಪಡೆದ 3 ವಿದ್ಯಾರ್ಥಿಗಳಿಗೆ ಸರ್ಕಾರಿ ಕಾರ್ಯಕ್ರಮದಡಿಯಲ್ಲಿ ಲ್ಯಾಪ್ ಟಾಪ್ ವಿತರಿಸುತ್ತಿದ್ದೇವೆ ಎಂದರು.

ಇನ್ನು, ನಾವು ಜಾರಿಗೆ ತಂದ ಕಾರ್ಯಕ್ರಮವನ್ನು ಸರ್ಕಾರ ಮುಂದುವರಿಸಿರುವುದೇ ಆಶ್ಚರ್ಯ ತಂದಿದೆ. ಇದಕ್ಕಾಗಿ ಈಗಿನ ಸರ್ಕಾರವನ್ನು ಅಭಿನಂದಿಸುತ್ತೇನೆ. ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಕೂಡ ನಡೆಯುತ್ತಿದೆ.
51 ಶಾಲೆಗಳಿಗೆ ಅರಣ್ಯ ಜಮೀನಿನಿಂದ ಮುಕ್ತವಾಗಿ ಹಕ್ಕುಪತ್ರ ದೊರೆಯುತ್ತಿದೆ. ಆ ಹಕ್ಕುಪತ್ರಗಳನ್ನು ಕೂಡ ಈಗ ವಿತರಿಸುತ್ತಿರುವುದು ಸಂತೋಷ ತಂದಿದೆ. ಆದರೆ ಕೆಲವೊಂದು ಶಾಲೆಗಳಿಗೆ ಕೇವಲ 2 ಗುಂಟೆ ಜಾಗ ಮಂಜೂರಾಗಿದೆ. ಇದರಿಂದ ಶಾಲಾ ಮಕ್ಕಳಿಗೆ ಆಟವಾಡಲು ಮೈದಾನ ಕೂಡ ಇಲ್ಲವಾಗಿದೆ. ಸರ್ಕಾರಿ ಕಚೇರಿ ಅಥವಾ ಸರ್ಕಾರಿ ಶಾಲೆಗಳಿಗೇ ಈ ರೀತಿ ಸ್ವಲ್ಪವೇ ಜಾಗ ಮಂಜೂರಾಗಿರುವುದು ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ವಿಶ್ವ ಹೃದಯ ದಿನದ ಕುರಿತು ಮಾತನಾಡಿದ ಅವರು, ಮುಂದಿನ ಪೀಳಿಗೆಯ ಮಕ್ಕಳ ಆರೋಗ್ಯವನ್ನು ರಕ್ಷಿಸುವಲ್ಲಿ ನಿರಂತರವಾಗಿ ಶ್ರಮಿಸೋಣ. ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ದುಶ್ಚಟಗಳಿಂದ ದೂರವಿರಿ ಎಂದು ಸಲಹೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv