ನನಗೆ ಗೌರವ ಕೊಡುವುದಾದ್ರೆ ಇಂಥಾ ಕೆಲ್ಸ ಮಾಡಬಾರದು: ಅಭಿಮಾನಿಗೆ ಕಿಚ್ಚನ ಕಿವಿಮಾತು!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಕೇವಲ ಹೆಸರಿಗೆ ಮಾತ್ರ ಆರಾಧ್ಯ ದೈವ ಅಲ್ಲ. ಕಿಚ್ಚನನ್ನು ದೇವರಂತೆ ಪೂಜಿಸುವ ಭಕ್ತರೂ ಇದ್ದಾರೆ. ಬೆಳ್ಳಿ ಪರದೆ ಮೇಲೆ ಕಿಚ್ಚನ ನಟನೆ ನೋಡಿ ಫಿದಾ ಆದವರಿಗೆ, ಒಮ್ಮೆಯಾದರೂ ತಮ್ಮ ನೆಚ್ಚಿನ ಕಿಚ್ಚನನ್ನು ಭೇಟಿಯಾಗಬೇಕೆಂಬ ಹಂಬಲ ಇದ್ದೇ ಇರುತ್ತೆ. ಆ ಪೈಕಿ ಸೌಮ್ಯ ಕೂಡ ಒಬ್ಬರು. ಸುದೀಪ್ ಮೇಲೆ ಅಪಾರ ಅಭಿಮಾನ ಹೊಂದಿರುವ ಸೌಮ್ಯ, ತನ್ನ ಕಿಚ್ಚನಿಗಾಗಿ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಏನಿದೆ ಸೌಮ್ಯಾ ಪತ್ರದಲ್ಲಿ?

ನನ್ನ ಹೆಸರು ಸೌಮ್ಯ ಎಂದು. ನನ್ನ ತಂದೆ ತೀರಿಕೊಂಡಿದ್ದಾರೆ. ನಿಮ್ಮ ಭೇಟಿಗೆ ತುಂಬಾ ಪ್ರಯತ್ನ ಪಟ್ಟಿದ್ದೀನಿ. ಆದರೆ ನಿಮ್ಮನ್ನು ಭೇಟಿ ಮಾಡಲು ಆಗುತ್ತಿಲ್ಲ. ಅದಕ್ಕೆ ಈಗ ನಾನು ರಕ್ತದಲ್ಲಿ ನಿಮಗಾಗಿ ಪತ್ರ ಬರೆಯುತ್ತಿದ್ದೇನೆ. ನನಗೆ ನಿಮ್ಮ ಸಂಘ ಮತ್ತು ನಿಮ್ಮ ಜೊತೆಯಿರುವ ವ್ಯಕ್ತಿಯನ್ನು ನಿಮ್ಮ ಭೇಟಿಗೆ ತುಂಬಾ ಕೇಳಿದ್ದೆ. ಆದ್ರೆ ಅವರಿಂದ ನಿರಾಸೆಯ ನೋವು ನನಗೆ ಜಾಸ್ತಿಯಾಗಿದೆ. ಈ ಪ್ರಯತ್ನಕ್ಕೆ ಪ್ಲೀಸ್​ ನೀವೇ ಭೇಟಿ ಮಾಡಿ. ಪ್ಲೀಸ್​ ಒನ್​ ಡೇಟ್​ ಹೇಳಿ. ರಾಕೇಶ್​​ ಅಂಡ್​ ಮಂಜಣ್ಣ ಇವರಿಗೆ ನಾನು ಗೊತ್ತು.

-ಇಂತಿ ನಿಮ್ಮ ಅಭಿಮಾನಿ ಸೌಮ್ಯ
ರಿಪ್ಲೇ ಮೀ ಬ್ರೊ ಪ್ಲೀಸ್​
ಇದು ನನ್ನ ಕೊನೆಯ ಪ್ರಯತ್ನ.. ಟು ಡೇಸ್​​ನಲ್ಲಿ ರಿಪ್ಲೇ ಬೇಕು.

ನನಗೆ ಗೌರವ ಕೊಡುವುದಾದರೆ ಈ ತರಹದ ಕೆಲಸ ಮಾಡಬಾರದು: ಕಿಚ್ಚ
ಅಭಿಮಾನಿಯ ಈ ಭೇಟಿ ಪ್ರಯತ್ನಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.. ಇದರ ಬಗ್ಗೆ ನಾನು ಹೆಮ್ಮೆ ಪಡಬೇಕೇ? ನೀವು ರಕ್ತದಿಂದ ಪತ್ರ ಬರೆದಿರುವುದು ನನಗೆ ತುಂಬಾನೆ ಬೇಸರ ತಂದಿದೆ. ಇದರಿಂದ ಹಿಂದಿನ ನೋವು ನನಗೆ ಅರ್ಥವಾಗುತ್ತದೆ. ನಾನು ಸದ್ಯದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ.
ಅಲ್ಲದೇ ಕಿಚ್ಚ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿದ್ದು, ನೀವು ನಿಜವಾಗಿಯೂ ನನಗೆ ಗೌರವ ಕೊಡುವುದಾದರೆ ಈ ತರಹದ ಕೆಲಸ ಮಾಡಬಾರದೆಂದು ವಿನಂತಿಸಿದ್ದಾರೆ.