ಒಂದೊಂದು ಸಲ ಗೆಲುವು ಆಗುತ್ತೆ ಸೋಲು ಆಗುತ್ತೆ, ಪ್ರಜಾಪ್ರಭುತ್ವದ ಮೂಲ ತತ್ವನೇ ಇದು-ಖರ್ಗೆ

ಕಲಬುರ್ಗಿ: ನಾಳೆ ಬೆಳಗ್ಗೆ 11 ಗಂಟೆಗೆ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಕರೆದಿದ್ದಾರೆ, ನಾಳೆ ಎಲ್ಲಾ ರಾಜ್ಯಗಳ ಉಸ್ತುವಾರಿ ಕಾರ್ಯದರ್ಶಿಗಳು ಸಭೆಯಲ್ಲಿ ಇರ್ತಾರೆ. ಅವರವರ ರಾಜ್ಯಗಳಲ್ಲಿ ಯಾವ ರೀತಿ ಚುನಾವಣೆಗಳು ನಡೀತು ಅಂತ ವಿವರಣೆ ಕೇಳ್ತಾರೆ ಅಲ್ಲಿ ನಮ್ಮ ಸೋಲಿನ ಪರಾಮರ್ಷೆ ಮಾಡ್ತೀವಿ ಅಂತಾ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸೋಲಿಲ್ಲದ ಸರ್ದಾರ ಎಂದೇ ಖ್ಯಾತರಾಗಿದ್ದ ಖರ್ಗೆ, ಮೊದಲ ಬಾರಿಗೆ ಚುನಾವಣೆ ರಾಜಕೀಯದಲ್ಲಿ ಸೋಲನ್ನು ಕಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರೋ ಅವರು, ಎಲ್ಲಾ ಕಡೆ ಮೋದಿ ವರ್ಸಸ್ ಲೋಕಲ್ ಕ್ಯಾಂಡಿಡೇಟ್ ಅಂತಾ ಆಗಿದೆ. ಒಬ್ಬ ಪ್ರಧಾನಿ ಪ್ರತಿ ಅಭ್ಯರ್ಥಿ ಎದುರು ನಾನೇ ಅಭ್ಯರ್ಥಿ ಅಂತಾ ಮೋದಿ ಪ್ರಚಾರ ಮಾಡಿದ್ದಾರೆ. ಪ್ರತಿಯೊಬ್ಬರ ರಕ್ತದಲ್ಲೂ‌ ದೇಶಭಕ್ತಿ ಹರೀತಿದೆ. ಪಕ್ಷದಲ್ಲಿದ್ದು ಕೆಲಸ ಮಾಡಿದರಷ್ಟೇ ದೇಶಭಕ್ತರಾ? ಎಲ್ಲರೂ ದೇಶಭಕ್ತರು ಎಲ್ಲರ ಮೇಲೂ ಜವಾಬ್ದಾರಿ ಇದೆ. ಆದ್ರೆ, ನ್ಯಾಷನಲಿಸಮ್ ಇಶ್ಯೂ ಮೇಲೆ ಚುನಾವಣೆ ಮಾಡೋ ಪ್ರಯತ್ನವನ್ನು ಅವರು ಮಾಡಿದರು, ಅದರಲ್ಲಿ ಯಶಸ್ವಿಯಾದರು ಎಂದು ಹೇಳಿದ್ದಾರೆ.

ಅಲ್ಲದೇ, ನಾವು ಸೋತಿದ್ದೇವೆ ಸೋಲನ್ನು‌ ಒಪ್ಪಿಕೊಂಡಿದೇವೆ, ಜನರ ತೀರ್ಪಿಗೆ ತಲೆಬಾಗುತ್ತೇವೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲುಂಟಾಗಿದೆ, ಅದನ್ನ ಎಕ್ಸೆಪ್ಟ್ ಮಾಡಿಕೊಂಡಿದ್ದೇವೆ, ನಾವೆಲ್ಲರೂ ಪೊಲಿಟಿಕಲ್ ಅನಿಮಲ್ ಇದ್ದ ಹಾಗೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಕೊಡ್ತಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆಯೂ ಪ್ರತಿಕ್ರಿಯೆ ನೀಡಿದ ಅವರು, ಒಂದೊಂದು ಸಲ ಗೆಲುವು ಆಗುತ್ತೆ, ಸೋಲು ಆಗುತ್ತೆ, ಪ್ರಜಾಪ್ರಭುತ್ವದ ಮೂಲ ತತ್ವನೇ ಇದು. ನಮ್ಮ ಪಕ್ಷ ಸೋತಿದೆ ಅಂತಾ ರಾಜೀನಾಮೆ ಕೊಡ್ತಾರೆ ಅನ್ನೋದು ಅಥವಾ ಕೇಳೋದು ಸರಿಯಲ್ಲ. ನಮ್ಮ‌ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯುತ್ತಾರೆ ಅದರ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv