ಕೆಜಿಎಫ್‌ಗೆ ಫುಲ್‌ ಮಾರ್ಕ್ಸ್‌ ಕೊಟ್ಟ ಪಾಕಿಸ್ತಾನಿಯರು!

ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್‌ ಸಿನಿಮಾ ಪಾಕಿಸ್ತಾನದಲ್ಲಿ ಈಗ ಹೊಸ ಅಲೆಯನ್ನೇ ಎಬ್ಬಿಸಿದೆ. ನಿನ್ನೆಯಷ್ಟೇ ಪಾಕಿಸ್ತಾನದಲ್ಲಿ ರಿಲೀಸ್ ಆಗಿರೋ ಕೆಜಿಎಫ್ ಹಿಂದಿ ಅವತರಣಿಕೆಯ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದ್ದು, ಪಾಕಿಸ್ತಾನಿಗರು ಕೆಜಿಎಫ್‌ಗೆ ಫುಲ್‌ ಮಾರ್ಕ್ಸ್ ಕೊಟ್ಟಿದ್ದಾರೆ. ಕೆಜಿಎಫ್‌ ಸಿನಿಮಾ ನೋಡಿ ಹೊರ ಬಂದ ಮಂದಿ ಪಾಕಿಸ್ತಾನಿ ಮಾಧ್ಯಮಗಳ ಮುಂದೆ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರು ಯಶ್‌ ಕ್ಲಾಸ್‌, ತುಂಬಾ ಇಷ್ಟವಾಯ್ತು. ಪ್ರತಿ ಕ್ಷಣ ಮುಂದೇನಾಗುತ್ತೋ ಅನ್ನೋ ಕುತೂಹಲ ಇತ್ತು. ಹೃದಯ ಗೆದ್ದು ಬಿಟ್ಟಿತು ಸಿನಿಮಾ. 2ನೇ ಚಾಪ್ಟರ್‌ ಯಾವಾಗ ಬರುತ್ತೋ ಕಾಯ್ತಿವಿ ಎಂದು ಹೇಳಿ ಸಿನಿಮಾಗೆ 5ಕ್ಕೆ 5 ಅಂಕ ನೀಡಿದ್ರು.

ಪಾಕಿಸ್ತಾನದಲ್ಲೂ ಇದ್ದಾರೆ ಯಶ್‌ ಫ್ಯಾನ್ಸ್!
ಇನ್ನೊಬ್ರು ಪ್ರೇಕ್ಷಕರಂತೂ ಸಿನಿಮಾ ನೋಡಿ ಎಷ್ಟು ದಿಲ್ ಖುಷ್‌ ಆಗಿದ್ರು ಅಂದ್ರೆ ಸೌತ್‌ ಇಂಡಿಯನ್ ಸಿನಿಮಾಗಳು ಪಾಕಿಸ್ತಾನದಲ್ಲಿ ತೆರೆಕಂಡಾಗ ಖುಷಿಯಾಗುತ್ತೆ. ಕಥೆ ಚೆನ್ನಾಗಿದೆ. ಪಕ್ಕಾ ಹಾಲಿವುಡ್‌ ಸಿನಿಮಾ ಥರಾನೇ ಇದೆ. ನಾನು ಯಶ್‌ ಸಾಕಷ್ಟು ಸಿನಿಮಾಗಳನ್ನ ಈಗಾಗ್ಲೇ ನೋಡಿದಿನಿ. ಇದೂ ಸೂಪರ್‌ ಅಂದ್ರು. ಮತ್ತೊಬ್ರು ಜಬರ್ದಸ್ತ್ ಸಿನಿಮಾ ಹೀರೋ ಹೀರೋಯಿನ್ ಸೀನ್ ಚೆನ್ನಾಗಿತ್ತು ಈ ರೇಂಜ್‌ನ ಸಿನಿಮಾಗಳು ಪಾಕಿಸ್ತಾನದಲ್ಲೂ ಬರಬೇಕು ಎಂದು ಹೇಳಿದ್ದಾರೆ. ಹಾಗೇ ಯಶ್‌ ನಟನೆಗೆ ಫುಲ್‌ ಮಾರ್ಕ್ಸ್‌ ಕೊಟ್ಟು ಯಶ್‌ ಫ್ಯೂಚರ್ ಸೂಪರ್‌ಸ್ಟಾರ್‌ ಆಗೋ ಥರಾ ಕಾಣ್ತಾರೆ. ಅವರ ಲುಕ್ಸ್, ಆ್ಯಕ್ಷನ್ ಎಲ್ಲವೂ ಚೆನ್ನಾಗಿದೆ ಅಂದ್ರು.
ಒಬ್ರು ಹಿರಿಯ ನಾಗರೀಕರು ಹೇಳಿದಂತೆ ಅವ್ರು ಕೆಜಿಎಫ್‌ ಟ್ರೈಲರ್ ನೋಡಿದಾಗಿನಿಂದ ಸಿನಿಮಾಗಾಗಿ ಕಾಯ್ತಿದ್ರಂತೆ. ಸಿನಿಮಾ ಬಂದಿದ್ದೇ ಗೊತ್ತಾಗಿಲ್ಲ. ಸಡನ್ನಾಗಿ ಗೊತ್ತಾಯ್ತು ಬಂದೆ. ಸಿನಿಮಾ ನೋಡಿ ಇಷ್ಟವಾಯ್ತು ಅಂದ್ರು.

ಪಾಕಿಸ್ತಾನದಲ್ಲಿ ಅಷ್ಟಾಗಿ ಸಿಕ್ಕಿಲ್ವಂತೆ ಪ್ರಚಾರ
ಸಿನಿಮಾ ನೋಡಿದ ಹೆಚ್ಚು ಮಂದಿ ಹೇಳಿದ್ದು ಸಿನಿಮಾ ಯಾವಾಗ ರಿಲೀಸ್‌ ಆಗ್ತಿದೆ ಅನ್ನೋದರ ಮಾಹಿತಿ ಸರಿಯಾಗಿ ಸಿಕ್ಕಿಲ್ಲ. ಅಷ್ಟಾಗಿ ಇಲ್ಲಿ ಸಿನಿಮಾ ಪ್ರಚಾರ ಆಗಿಲ್ಲ. ತುಂಬಾ ಜನ್ರಿಗೆ ಸಿನಿಮಾ ರಿಲೀಸ್ ಆಗಿರೋದೆ ಗೊತ್ತಿಲ್ಲ. ಪ್ರಚಾರ ಹೆಚ್ಚು ಸಿಕ್ಕಿದ್ರೆ ಇನ್ನೂ ಹೆಚ್ಚು ಮಂದಿ ಬರ್ತಾರೆ. ಸೌತ್ ಇಂಡಿಯನ್‌ ಸಿನಿಮಾಗಳು ಚೆನ್ನಾಗಿ ಬರ್ತಿವೆ. ಯಶ್ ಆ್ಯಕ್ಷನ್ ಚೆನ್ನಾಗಿದೆ ಅಂದ್ರು. ಹೀಗೆ..ಸಿನಿಮಾ ನೋಡಿದ ಪ್ರತಿಯೊಬ್ಬರಿದೂ ಕೆಜಿಎಫ್‌ ಇಷ್ಟವಾಗ್ತಿದ್ದು ಇಲ್ಲೂ ಬಾಕ್ಸ್ ಆಫಿಸ್ ಚಿಂದಿ ಮಾಡೋ ಲಕ್ಷಣಗಳು ಕಾಣಿಸ್ತಿವೆ.
ಪಾಕಿಸ್ತಾನದ ಐಎಂಜಿಸಿ ಬ್ಯಾನರ್ ಆಡಿ, ಹಿಂದಿ ಆವತರಣಿಕೆಯಲ್ಲಿ ಕೆಜಿಎಫ್ ಸಿನಿಮಾ ನಿನ್ನೆ ಬಿಡುಗಡೆಯಾಗಿದೆ.ಈ ಹಿಂದೆ ಭಾರತದ ಅನೇಕ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ ಕೋಟಿ ಕೋಟಿ ಹಣ ಗಳಿಸಿದ್ದವು.ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಪಾಕಿಸ್ತಾನದಲ್ಲಿ ತೆರೆ ಕಂಡಿದೆ.

ಪಾಕಿಸ್ತಾನದಲ್ಲಿ ಇಂಡಿಯನ್‌ ಸಿನಿಮಾಗಳನ್ನ ವೀಕ್ಷಿಸೋರ ಸಂಖ್ಯೆಗೇನು ಕಡಿಮೆಯಿಲ್ಲ. 1980ರ ದಶಕದಲ್ಲಿ ಬಾಲಿವುಡ್‌ನ ಅಮಿತಾಬ್, ಧರ್ಮೇಂದ್ರ, ರಿಷಿ ಕಪೂರ್, ಬಳಿಕ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್‌ ಸಿನಿಮಾಗಳು ಅಂದ್ರೆ ಮುಗಿಬಿದ್ದು ನೋಡ್ತಿದ್ರು. ಈಗ ಕನ್ನಡ ಮೂಲದ ಸಿನಿಮಾಗಳನ್ನ, ಕನ್ನಡ ನಟರನ್ನ ಇಷ್ಟ ಪಡ್ತಿದ್ದಾರೆ.ಆ ನಿಟ್ಟಿನಲ್ಲಿ ಪಾಕ್ ನೆಲದಲ್ಲಿ ಕೆಜಿಎಫ್ ಹವಾ ಎಬ್ಬಿಸುತ್ತಿರುವುದು ಮತ್ತೊಂದು ಮೈಲಿಗಲ್ಲಾಗಿದೆ.