ನಾಳೆ ಬರ್ತಿದ್ದಾರೆ ಹೊಸ ‘ಕೆಂಪೇಗೌಡ್ರು’ ..!

ಕೆಂಪೇಗೌಡ… ಕಿಚ್ಚ ಸುದೀಪ್ ನಟನೆಯಲ್ಲಿ ಮೂಡಿಬಂದ ಬ್ಲಾಕ್ ಬಾಸ್ಟರ್​ ಸಿನಿಮಾ. ಕೆಂಡದಂತ ಕಣ್ಣು, ಹುರಿಗಟ್ಟಿದ ಮೀಸೆ, ಮಿಂಚಿನಂತ ವೇಗದಲ್ಲಿ ಖಡಕ್ ಡೈಲಾಗ್ ಹೊಡೆದು ಅಭಿಮಾನಿಗಳ ಮೈ ರೋಮಾಂಚನಗೊಳಿಸಿದ್ದ ಚಿತ್ರ. ಖಡಕ್ ಪೋಲಿಸ್ ಅಧಿಕಾರಿ ರೋಲ್​ನಲ್ಲಿ ಭ್ರಷ್ಟರಿಗೆ ಸಿಂಹಸ್ವಪ್ನವಾಗಿ ಕಿಚ್ಚ ಕಾಡಿದ್ರು. ಸುದೀಪ್ ಡೈರೆಕ್ಷನ್​ನಲ್ಲಿ 2011ರಲ್ಲಿ ತೆರೆಕಂಡಿದ್ದ ಚಿತ್ರ ಸ್ಯಾಂಡಲ್​ವುಡ್​ನಲ್ಲಿ ಹೊಸ ಧಮಾಕವನ್ನೇ ಸೃಷ್ಟಿಸಿತ್ತು. ಇದೀಗ ಅದೇ ಗೆಟಪ್​ನಲ್ಲಿ ಕಾಮಿಡಿ ಕಿಂಗ್ ಕೋಮಲ್ ಮಿಂಚೋಕೆ ರೆಡಿಯಾಗ್ತಿದ್ದಾರೆ.

ಕೋಮಲ್ ಈಗ ಕೆಂಪೇಗೌಡ..!
ಹೌದು ರೋಷನ್ ಮೋಹನ್ ನಿರ್ದೇಶನದಲ್ಲಿ, ಕೋಮಲ್ ಕುಮಾರ್ ನಾಯಕನಾಗಿ ಕೆಂಪೇಗೌಡ-2 ಸಿನಿಮಾ ಸೆಟ್ಟೇರಿತ್ತು. ಆದ್ರೆ ಕಾರಣಾಂತರಗಳಿಂದ ಚಿತ್ರೀಕರಣ ತಡವಾಗಿತ್ತು. ಇದೀಗ ಚಿತ್ರತಂಡ ಸದ್ದಿಲ್ಲದೇ ಶೂಟಿಂಗ್ ಮುಗಿಸಿದೆ. ಪೋಸ್ಟ​ರ್​ನಿಂದಲೇ ಭಾರೀ ಕುತೂಹಲ ಮೂಡಿಸಿದ್ದ ಚಿತ್ರದ ಮೊದಲ ಟ್ರೈಲರ್ ನಾಳೆ ರಿಲೀಸ್ ಆಗ್ತಿದೆ. ಇಲ್ಲಿವರೆಗೂ ಕಾಮಿಡಿ ರೋಲ್​​ನಲ್ಲಿ ಮಿಂಚಿದ್ದ ಕೋಮಲ್, ಮೊದಲ ಬಾರಿಗೆ ಖಾಕಿ ತೊಟ್ಟು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. 3 ವರ್ಷಗಳ ಬಳಿಕ ಕೋಮಲ್ ಚಿತ್ರ ಬರ್ತಾಯಿದ್ದು ಟ್ರೈಲರ್​ ನಿರೀಕ್ಷೆ ಹೆಚ್ಚಿಸಿದೆ. ಒಟ್ಟಾರೆ ಸುದೀಪ್ ಅಬ್ಬರದಂತೆಯೇ ಖಾಕಿ ಖದರ್​ನಲ್ಲಿ ಕೋಮಲ್​ ಕೂಡ ಹೇಗೆಲ್ಲಾ ಘರ್ಜಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv