ಚಿನ್ನ ಗೆದ್ದ ಚಿನ್ನದನಾಡಿನ ‘ಸ್ನೂಕರ್ ಕೀರ್ತನಾ’ ಗುರಿ ಈಗ ಒಲಿಂಪಿಕ್ಸ್​​ನತ್ತ..!

ಕೆಜಿಎಫ್: ಚಿನ್ನದ ನಾಡಿನ ಹುಡುಗಿ ಕೀರ್ತನಾ, ವಿಶ್ವ ಸ್ನೂಕರ್ಸ್​ ಜೂನಿಯರ್​ ಚಾಂಪಿಯನ್​ ಶಿಪ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾಳೆ. ಈ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೂ ಕೀರ್ತಿ ತಂದಿದ್ದಾಳೆ.
ಕೆಜಿಎಫ್ ತಾಲೂಕಿನ ದಾಸರಹೊಸಹಳ್ಳಿಯ ಕೀರ್ತನಾ, ರಷ್ಯಾದ  ಸೇಂಟ್ ಪೀಟರ್ಸ್​​ಬರ್ಗ್‌ನಲ್ಲಿ ನಡೆದ 16 ವರ್ಷದೊಳಗಿನ ಅಂತಾರಾಷ್ಟ್ರೀಯ ಬಾಲಕಿಯರ ಸ್ನೂಕರ್ ಚಾಂಪಿಯನ್ ಶಿಪ್​ನಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ. ಇದರಿಂದ ಕೀರ್ತನಾ ಇಂದು ವಿಶ್ವ ಸ್ನೂಕರ್ ಱಂಕಿಂಗ್‌ನಲ್ಲಿ 8ನೇ ಸ್ಥಾನ ಹಾಗೂ ಜೂನಿಯರ್‍ಸ್‌ನಲ್ಲಿ ವಿಶ್ವದ ಮೊದಲನೇ ಱಂಕಿಂಗ್‌ ಗಳಿಸಿದ್ದಾಳೆ. ಚಾಂಪಿಯನ್ ಶಿಪ್‌ನಲ್ಲಿ ಬೊಲೆರಸ್ ದೇಶದ ಸ್ಪರ್ಧಿಯನ್ನು ಸೋಲಿಸುವ ಮೂಲಕ ಕೀರ್ತನಾ ಈ ಸಾಧನೆ ಮಾಡಿದ್ದಾಳೆ.

ಯಾರೀ ‘ಸ್ನೂಕರ್ ಕೀರ್ತನಾ’?
ಬೆಮೆಲ್ ಅಧಿಕಾರಿಯಾಗಿರುವ ಪಾಂಡ್ಯನ್ ಮತ್ತು ಗೃಹಿಣಿ ಜಯಲಕ್ಷ್ಮೀ ದಂಪತಿಯ ಎರಡನೇ ಪುತ್ರಿ ಕೀರ್ತನಾ, ಕೆಜಿಎಫ್‌ನ ಜೈನ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಇವರ ತಂದೆಯೂ ಸ್ನೂಕರ್ ಆಟಗಾರರೇ. ಕೀರ್ತನಾ, 12ನೇ ವಯಸ್ಸಿನಿಂದಲೇ ತಮ್ಮ ತಂದೆಯೊಂದಿಗೆ ಬೆಮೆಲ್ ಕ್ಲಬ್‌ಗೆ ಆಟ ನೋಡಲು ಹೋಗುತ್ತಿದ್ದಳು. ಅಪ್ಪನ ಆಟವನ್ನ ನೊಡುತ್ತಾ ಸ್ನೂಕರ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಳು. ಕೀರ್ತನಾ ಆಸಕ್ತಿ ಗಮನಿಸಿದ ತಂದೆ ಪಾಂಡ್ಯನ್, ಬೆಮೆಲ್​ನಲ್ಲಿ ಪ್ರಾಥಮಿಕ ತರಬೇತಿ ನೀಡಿದರು. ನಂತರ ಬೆಂಗಳೂರಿನಲ್ಲಿ ಪ್ರತಿಷ್ಠಿತ ಕೋಚರ್‌ಗಳಾದ ಪಂಕಜ್ ಅಡ್ವಾಣಿ ಹಾಗೂ ರವೀಂದ್ರ ನಾಥ್ ಅವರ ಸಹಾಯದಿಂದ ರಷ್ಯಾದಲ್ಲಿ ನಡೆದ ಜೂನಿಯರ್ ಸ್ನೂಕರ್ ಚಾಂಪಿಯನ್ ಶಿಪ್‌ನಲ್ಲಿ ಜಯಗಳಿಸಿದ್ದಾಳೆ.

ಈಗ ಕೀರ್ತನಾಗೆ ಮತ್ತೊಂದು ಬಳುವಳಿ ಬಂದಿದೆ. ಅದೂ ಬೆಂಗಳೂರಿನ ಕರ್ನಾಟಕ ಬಿಲಿಯರ್ಡ್ಸ್​​ ಅಸೋಸಿಯೇಷನ್​ (ಕೆಎಸ್‌ಬಿಎ) ಈ ಚಿನ್ನದ ಹುಡುಗಿಗೆ ಉಚಿತ ಸದಸ್ಯತ್ವ ನೀಡಿದೆ. ಜೊತೆಗೆ ಸ್ನೂಕರ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿರುವ ಕೀರ್ತನಾಗೆ ಕೋಲಾರ ಜಿಲ್ಲಾಡಳಿತ, ಕಾಲೇಜು ಆಡಳಿತ ಮಂಡಳಿಯವರು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ. ಚಿನ್ನದ ಪದಕ ಪಡೆದಿರುವ ಕೀರ್ತನಾ, 2024 ರಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿ, ಚಿನ್ನದ ಪದಕ ಗೆಲ್ಲಬೇಕೆನ್ನುವ ಗುರಿ ಹೊಂದಿದ್ದಾಳೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv