ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ ಸಮರ್ಥವಾಗಿದೆ: ಸಿಎಂ ಕುಮಾರಸ್ವಾಮಿ

ಮೈಸೂರು: ನಗರದಲ್ಲಿರುವ ಪೊಲೀಸ್ ಅಕಾಡೆಮಿ ಮೈದಾನದಲ್ಲಿ ಇಂದು ಆರಕ್ಷಕ ಉಪನಿರೀಕ್ಷಕ ಪ್ರಶಿಕ್ಷಣಾರ್ಥಿಗಳ 41ನೇ ತಂಡದ ನಿರ್ಗಮನ ಪಥಸಂಚಲನ ನಡೆಯಿತು. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ.ಬಿ ಪಾಟೀಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಮೈಸೂರಿನ 12 ಮಂದಿ, ಚಾಮರಾಜನಗರದ 3, ಹಾಸನದ 12, ಮಂಡ್ಯದ 7 ಹಾಗೂ ಕೊಡಗಿನ ಇಬ್ಬರು ಸೇರಿದಂತೆ ಒಟ್ಟು 287 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದುಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ ಸಮರ್ಥವಾದ ಇಲಾಖೆ. ಪೊಲೀಸರಾಗಿ ಆಯ್ಕೆಯಾಗಿರೋದು ನಿಮ್ಮ ಸುದೈವ. ಅತ್ಯಂತ ಪ್ರಾಮಾಣಿಕರಾಗಿ ನಾಡಿನ ಪ್ರತಿಯೊಬ್ಬ ಪ್ರಜೆ ರಕ್ಷಣೆ ಮಾಡಿ.ಯಾವುದೇ ಒತ್ತಡಕ್ಕೆ ಬಗ್ಗದೆ ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡೋ ನಿರ್ಧಾರವನ್ನು ಈ ಮೈದಾನದಿಂದಲೇ ಮಾಡಿ, ಯಾವುದೇ ರಾಜಕಾರಣಿಗಳ ಒತ್ತಡಕ್ಕೆ ಮಣಿಯಬೇಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ,
ನಗರದಲ್ಲಿ ನಡೆದ 41 ನೇ ತಂಡದ ಆರಕ್ಷಕ ಉಪನಿರೀಕ್ಷಕರ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಮಾತನಾಡಿದ ಅವರು, ಎಳು ತಿಂಗಳ ನನ್ನ ಅವಧಿಯಲ್ಲಿ ನಾನು ಪೊಲೀಸ್ ನಿರ್ಗಮನ ಪಥಸಂಚಲನದಲ್ಲಿ, ಎರಡನೇ ಬಾರಿಗೆ ಭಾಗಿಯಾಗಿದ್ದೇನೆ. ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಉತ್ತಮ ತರಬೇತಿ ಪಡೆದಿದ್ದೀರಿ. ಜನರ ಸೇವೆ ಮಾಡಲು ಅತ್ಯುತ್ತಮ ಘಟ್ಟ ತಲುಪಿದ್ದೀರಿ. ಪೊಲೀಸ್ ಇಲಾಖೆ ಅತ್ಯುತ್ತಮ ಇಲಾಖೆ. ಸ್ಥಳ ನಿಯುಕ್ತಿಗೆ ಇತ್ತೀಚಿನ ವ್ಯವಸ್ಥೆಯಲ್ಲಿ ಪ್ರಭಾವ ಬೀರೋ ಪರಿಸ್ಥಿತಿಗೆ ಒಳಗಾಗಬೇಡಿ. ಯಾವುದೇ ಸ್ಥಳದಲ್ಲಿ ನಿಯುಕ್ತಿ ಮಾಡಿದ ವೇಳೆ, ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡಿ ಎಂದು ಅವರು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.