ನಮ್ಮ ರಾಜ್ಯದ ಶಾಸಕರೇ ದೇಶದಲ್ಲಿ ಫುಲ್ ಶ್ರೀಮಂತರಂತೆ..!

ನವದೆಹಲಿ: ‘ಕ್ಷೇತ್ರ ಉದ್ಧಾರ ಮಾಡ್ತೀವಿ, ಸಮಸ್ಯೆ ಬಗೆಹರಿಸ್ತೀವಿ’ ಅಂತಾ ದಯಮಾಡಿ ಒಂದು ಅವಕಾಶ ಕೊಡಿ ಅಂತಾ ಕಾಲಿಗೆ ಬಿದ್ದು ವೋಟ್ ಪಡ್ಕೊಂಡು ಅಂತೂ ಶಾಸಕರಾಗಿ ಬಿಡ್ತಾರೆ. ಜನರ ಸಮಸ್ಯೆಗೆ, ಕ್ಷೇತ್ರ ಅಭಿವೃದ್ಧಿಗಾಗಿ ಯಾವ ರೀತಿ ಸ್ಪಂದಿಸ್ತಾರೋ ಅನ್ನೋದು ಆಯಾ ಭಾಗದ ಜನಕ್ಕೆ ಮಾತ್ರ ಗೊತ್ತು. ಆದ್ರೆ ನಮ್ಮ ಶಾಸಕರ ಆದಾಯ ಮಾತ್ರ ದುಪ್ಪಟ್ಟು ಆಗುತ್ತಲೇ ಇದೆ. ಈ ಸಂಬಂಧ Association for Democratic Reforms ಒಂದು ಸರ್ವೇ ನಡೆಸಿತ್ತು. ಆ ಸರ್ವೇ ಪ್ರಕಾರ, ದೇಶದ ಎಲ್ಲಾ ಶಾಸಕರ ಆದಾಯದ ಸರಾಸರಿಯಲ್ಲಿ ರಾಜ್ಯದ ಎಂಎಲ್​ಎ ಗಳೇ ಅತ್ಯಂತ ಶ್ರೀಮಂತರಂತೆ!

Association for Democratic Reforms ವರದಿ ಪ್ರಕಾರ, ಭಾರತದ ಪ್ರತಿ ಶಾಸಕನ ಸರಾಸರಿ ವಾರ್ಷಿಕ ಆದಾಯ 24.59 ಲಕ್ಷ ರೂಪಾಯಿ. ಕರ್ನಾಟಕದ ಎಲ್ಲಾ 203 ಶಾಸಕರ ಒಟ್ಟು ವಾರ್ಷಿಕ ಆದಾಯ ಸರಾಸರಿ 111 ಲಕ್ಷ ರೂಪಾಯಿ ಎಂದಿದೆ. ವಾರ್ಷಿಕ ಆದಾಯದಲ್ಲಿ ಕರ್ನಾಟಕ ಶಾಸಕರೇ ಮೇಲುಗೈ ಸಾಧಿಸಿದ್ರೆ, ಚತ್ತೀಸ್‌ಗಢದ 63 ಶಾಸಕರ ಒಟ್ಟು ಸರಾಸರಿ ವಾರ್ಷಿಕ ಆದಾಯ 5.4 ಲಕ್ಷ ಹೊಂದಿದ್ದಾರೆ. ಇದು ಅತ್ಯಂತ ಕಡಿಮೆ ಸರಾಸರಿ ಆದಾಯ ಹೊಂದಿರುವ ಶಾಸಕರ ರಾಜ್ಯ ಅಂತಾ ವರದಿಯಲ್ಲಿ ಉಲ್ಲೇಖವಾಗಿದೆ.

ರಾಜ್ಯದ ಬೆಂಗಳೂರು ಗ್ರಾಮೀಣ ಹೊಸಕೋಟೆ ಶಾಸಕ ಎಂಟಿಬಿ.ನಾಗರಾಜು ಅತ್ಯಂತ ಹೆಚ್ಚಿನ ಸರಾಸರಿ ಆದಾಯ ಹೊಂದಿರುವ ಶಾಸಕರಾಗಿದ್ದು, ಇವರ ವಾರ್ಷಿಕ ಸರಾಸರಿ ಆದಾಯ 157.04 ಕೋಟಿ ರೂಪಾಯಿ. ಅತ್ಯಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಎಂಎಲ್ಎ ಆಂಧ್ರಪ್ರದೇಶದ ಬಿ.ಯಾಮಿನಿ ಬಾಲ. ಇವರ ವಾರ್ಷಿಕ ಸರಾಸರಿ ಆದಾಯ 1 ಸಾವಿರದ 301 ರೂಪಾಯಿ ಮಾತ್ರ. ಕರ್ನಾಟಕದ ಎಲ್ಲಾ 203 ಶಾಸಕರ ಒಟ್ಟು ವಾರ್ಷಿಕ ಸರಾಸರಿ ಆದಾಯ 111 ಲಕ್ಷ ರೂಪಾಯಿಗಳಾಗಿದ್ದು, ವಾರ್ಷಿಕ ಆದಾಯದಲ್ಲಿ ಕರ್ನಾಟಕ ಶಾಸಕರದ್ದೇ ಮೇಲುಗೈ.

ವರದಿಯಲ್ಲಿ ಶಾಸಕರ ವಿದ್ಯಾರ್ಹತೆ ಆಧಾರದಲ್ಲಿ ವಾರ್ಷಿಕ ಆದಾಯದವನ್ನು ಗಣನೆ ಮಾಡಿದ್ದು, ಅದರಲ್ಲಿ 8ನೇ ತರಗತಿ ಪಾಸ್ ಆದ ಶಾಸಕರು ಅತ್ಯಂತ ಹೆಚ್ಚಿನ ಆದಾಯವನ್ನು ಹೊಂದಿದ್ದಾರೆ. ಅನಕ್ಷರಸ್ಥ ಶಾಸಕರು ಕಡಿಮೆ ಆದಾಯ ಹೊಂದಿದ್ದಾರೆ. ವಿದ್ಯಾರ್ಹತೆ ಆಧಾರದ ಮೇಲೆ ಶಾಸಕರ ವಾರ್ಷಿಕ ಆದಾಯದ ಪಟ್ಟಿ ನೋಡೋದಾದ್ರೆ, 8th ಕ್ಲಾಸ್ ಪಾಸ್ ಆದವರ ಗಳಿಕೆಯ ಸರಾಸರಿ ಹೆಚ್ಚಾಗಿದೆ. ಒಟ್ಟು  ₹89.88 ಲಕ್ಷ ಸರಾಸರಿ ಆದಾಯ ಗಳಿಸುತಿದ್ರೆ, ಇತರೆ ಶಾಸಕರು ₹28.49 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅವರಲ್ಲಿ ಗ್ರಾಜ್ಯುಯೇಟ್ ಪ್ರೊಫೆಷನಲ್ ₹25.23 ಲಕ್ಷ, ಅಕ್ಷರಸ್ಥರು ₹23.45 ಲಕ್ಷ, 12ನೇ ಕ್ಲಾಸ್ ಪಾಸ್ ₹23.38 ಲಕ್ಷ, 10ನೇ ಕ್ಲಾಸ್‌ ಪಾಸ್ ₹20.99 ಲಕ್ಷ, ಪದವಿ ₹19.8 ಲಕ್ಷ, ಸ್ನಾತಕೋತ್ತರ ಪದವಿ ₹19.75 ಲಕ್ಷ, 5ನೇ ಕ್ಲಾಸ್ ಪಾಸ್ ₹17.91 ಲಕ್ಷ, ಡಾಕ್ಟರೇಟ್ ₹12.43 ಲಕ್ಷ, ಅನಕ್ಷರಸ್ಥರು ₹9.31 ಲಕ್ಷ ಗಳಿಸುತ್ತಿದ್ದಾರೆ ಎಂದು ವರದಿ ಹೇಳಿದೆ.