ರಾಜ್ಯದ ಟಿಬೆಟಿಯನ್‌ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಹೆಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿರುವ ಟಿಬೆಟಿಯನ್‌ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ‘ಧನ್ಯವಾದ ಕರ್ನಾಟಕ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಿರೋದು ಸಂತಸ ತಂದಿದೆ. ಭಾರತ-ಟಿಬೆಟ್ ಮಧ್ಯೆ ಉತ್ತಮ ಬಾಂಧವ್ಯ ಬೆಸೆದಿದೆ ಎಂದರು. ನಿಜಲಿಂಗಪ್ಪ ಅವರ ಕಾಲದಲ್ಲಿ ಟಿಬೆಟಿಯನ್ ಜನರಿಗೆ ರಾಜ್ಯದಲ್ಲಿ ಆಶ್ರಯ ನೀಡಲಾಯ್ತು. ಅಂದಿ‌ನಿಂದ ಸರ್ಕಾರ ಎಲ್ಲಾ ಸಹಕಾರ ನೀಡುತ್ತಾ ಬಂದಿದೆ. ಮುಂದೆಯೂ ಸರ್ಕಾರ ಟಿಬೆಟಿಯನ್ನರಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಕರ್ನಾಟಕದಲ್ಲಿ ನೆಲೆಸಿರುವ ಟಿಬೆಟ್ ಜನರಿಂದ ‘ಧನ್ಯವಾದ ಕರ್ನಾಟಕ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಟಿಬೆಟಿಯನ್ ಧರ್ಮಗುರು ದಲೈಲಾಮಾ ಭಾಗಿಯಾಗಿದ್ದರು. ಟಿಬೆಟ್ ಜನರಿಗೆ ಆಶ್ರಯ ಕಲ್ಪಿಸಿರುವ ಕರ್ನಾಟಕಕ್ಕೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಅವರಿಗೆ ಬೌದ್ಧ ಧರ್ಮದ ಪ್ರಮುಖ ಚಿಹ್ನೆ ಚಿನ್ನ ಲೇಪಿತ, ಬೆಳ್ಳಿ ಹೊದಿಕೆಯ ‘ಧರ್ಮಚಕ್ರ’ ನೀಡಿ ಸನ್ಮಾನಿಸಲಾಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv