‘ಸಂಪುಟ ವಿಸ್ತರಣೆಯಾದ್ರೆ, ಒಂದೇ ವಾರದಲ್ಲಿ ಸರ್ಕಾರ ಬೀಳುತ್ತೆ’

ತುಮಕೂರು: ಸಂಪುಟ ವಿಸ್ತರಣೆಯಾದ ಒಂದು ವಾರದೊಳಗೆ ಸರ್ಕಾರ ಬಿದ್ದು ಹೋಗಲಿದೆ. ಮಧ್ಯಂತರ ಚುನಾವಣೆ ಯಾವಾಗ ಬೇಕಾದ್ರೂ ಬರಬಹುದು. ಸ್ಥಳೀಯ ಸಂಸ್ಥೆಯ ಎಲ್ಲ ಚುನಾವಣೆಯಲ್ಲಿ ಗೆಲ್ಲಲು ಕಾರ್ಯಕರ್ತರು ಈಗಲೇ ತಯಾರಿ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಕೆ.ರಾಜಣ್ಣ ಹೇಳಿದ್ದಾರೆ.
ಮಧುಗಿರಿಯಲ್ಲಿ ಆಯೋಜಿಸಿದ್ದ ‘ಕಾರ್ಯಕರ್ತರಿಗೆ ಅಭಿನಂದನೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡದಿದ್ರೆ ಸರ್ಕಾರದ ವಿರುದ್ಧ ಹೋರಾಟ ಮಾಡೋದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಮಧುಗಿರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ವಿರುದ್ಧ ರಾಜಣ್ಣ ಭಾರಿ ಮತಗಳ ಅಂತರದಿಂದ ಸೋಲುಂಡಿದ್ದರು.
ಸಿದ್ದರಾಮಯ್ಯ ಇದ್ರೆ ಮಾತ್ರ ಕಾಂಗ್ರೆಸ್
ಜೆಡಿಎಸ್ ವಿರುದ್ಧ ಸೋತಿದ್ದ ರಾಜಣ್ಣರನ್ನು ಮೊನ್ನೆಯಷ್ಟೇ ಡಿಸಿಎಂ ಡಾ. ಜಿ. ಪರಮೇಶ್ವರ್ ಭೇಟಿಯಾಗಿ ಸಂತೈಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯರ ಇಂದಿನ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾಗಿ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಇದ್ರೆ ಮಾತ್ರ ಕಾಂಗ್ರೆಸ್, ಇಲ್ಲದಿದ್ದರೆ ಏನೂ ಇಲ್ಲಾ ಅನ್ನೋ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ರಾಜ್ಯವನ್ನು ಲೂಟಿ ಮಾಡದೇ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈಗ ಅವರಿಗೆ ಕೈಕಟ್ಟಿ ನಿಲ್ಲುವ ದಯನೀಯ ಸ್ಥಿತಿ ಬಂದಿದೆ ಅಂತಾ ಮಾಜಿ ಶಾಸಕ ಕೆ.ರಾಜಣ್ಣ ವಿಷಾದ ವ್ಯಕ್ತಪಡಿಸಿದ್ರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv