ಉ-ಕ ಗೆ ಅನ್ಯಾಯ, ಕರ್ನಾಟಕ ಅಂದ್ರೆ ಕೇವಲ ದಕ್ಷಿಣ ಕರ್ನಾಟಕವಾ!?

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಉತ್ತರ ಕರ್ನಾಟಕಕ್ಕೆ ತೀವ್ರ ಅನ್ಯಾಯ ಮಾಡಿದೆ. ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರ ಬಜೆಟ್‌ ಮೇಲೆ, ವಿಶೇಷವಾಗಿ ರೈತ ಸಮುದಾಯ ಇಟ್ಟ ಭರವಸೆ ಹುಸಿಯಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿ. ಪಿ. ಲಿಂಗನಗೌಡರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತ‌ನಾಡಿದ ಅವರು, ರೈತರು ರಾಷ್ಟ್ರೀಕೃತ ಬ್ಯಾಂಕ್​ನಲ್ಲಿರುವ ತಮ್ಮ ಸಾಲ ಮನ್ನಾ ಆಗುತ್ತದೆ ಅಂತಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿಎಂ ಹೆಚ್‌ಡಿಕೆ ಬರೀ ₹ 2 ಲಕ್ಷದ ವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ರೈತರಿಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ನಡೆದುಕೊಂಡಿಲ್ಲಾ ಅಂತಾ ಹರಿಹಾಯ್ದರು.
ಸಂಪನ್ಮೂಲ ಕ್ರೋಢೀಕರಣದ ನೆಪ ಮುಂದಿಟ್ಟುಕೊಂಡು ತೈಲ ಬೆಲೆ 1.12 ಪೈಸೆ ಹಾಗೂ ವಿದ್ಯುತ್ ಬಿಲ್ ಕೂಡಾ ಹೆಚ್ಚಳ ಮಾಡಿದ್ದಾರೆ. ಇದರಿಂದ ಜನಸಾಮಾನ್ಯರು ಪರಿತಪಿಸುವಂತಾಗಿದೆ. ಕರ್ನಾಟಕ ಅಂದರೆ ಕೇವಲ ದಕ್ಷಿಣ ಕರ್ನಾಟಕ ಅಂತಾಗಿ ಬಿಟ್ಟಿದೆ. ಯಾರೇ ಬಜೆಟ್ ಮಂಡಿಸಿದರೂ ದಕ್ಷಿಣ ಕರ್ನಾಟಕಕ್ಕೆ ಹೆಚ್ಚು ಅನುದಾನ ಕೊಡುತ್ತಾರೆ. ಈ ಬಾರಿಯ ಬಜೆಟ್‌ನಲ್ಲಿ ಹುಬ್ಬಳ್ಳಿ ರಿಂಗ್ ರೋಡ್ ಸೇರಿದಂತೆ ಅವಳಿ ನಗರಗಳ ಅಭಿವೃದ್ಧಿಗೆ ಒತ್ತುಕೊಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅದನ್ನು ನೀಡದೇ, ದೋಸ್ತಿ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದೆ ಎಂದು ವಿ. ಪಿ. ಲಿಂಗನಗೌಡರ ಆರೋಪಿಸಿದ್ದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv