ಸಿಎಂ ಕುಮಾರಸ್ವಾಮಿಗೆ ರಕ್ತಸಿಕ್ತ ಪತ್ರ ಬರೆದ ಕರ್ನಾಟಕ ನವ ನಿರ್ಮಾಣ ಸೇನೆ..!

ಧಾರವಾಡ: ವಿದ್ಯಾರ್ಥಿಗಳ ಕೊರತೆ ನೆಪ ಮುಂದಿಟ್ಟುಕೊಂಡು ರಾಜ್ಯ ಸರ್ಕಾರವೂ 28 ಸಾವಿರ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಸರ್ಕಾರದ ಈ ಕ್ರಮವನ್ನು ವಿರೋಧಿಸಿ, ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಜಿಲ್ಲಾಧಿಕಾರಿ ಮೂಲಕ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್​ ಭಾಷೆಯನ್ನು ಮಾಧ್ಯಮವಾಗಿ ಕಲಿಸುವುದು ಬೇಡ. ಒಂದು ಭಾಷೆಯಾಗಿಯಷ್ಟೇ ಕಲಿಸಿ ಎಂದು ನವ ನಿರ್ಮಾಣ ಸೇನೆ ಸೇರಿದಂತೆ ನಾಡಿನ ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದಾರೆ.
ಆದರೆ ಸರ್ಕಾರ ಪ್ರಸ್ತಕ ಶೈಕ್ಷಣಿಕ ವರ್ಷದಲ್ಲಿಯೇ 1,000 ಇಂಗ್ಲೀಷ್​​ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿರುವುದು ಕನ್ನಡಪರ ಹೋರಾಟಗಾರರ ಆಕ್ರೋಶ ಹೆಚ್ಚಿಸಿದೆ. ಹಾಗಾಗಿ, ಕೂಡಲೇ ಈ ಆದೇಶವನ್ನು ರದ್ದುಪಡಿಸಿ, ಇಂಗ್ಲೀಷ್​ಅನ್ನು ಭಾಷೆಯಾಗಿಯಷ್ಟೇ ಕಲಿಸುವ ತೀರ್ಮಾನ ಘೋಷಿಸಬೇಕು. ವಿಲೀನದ ಹೆಸರಲ್ಲಿ 28 ಸಾವಿರ ಶಾಲೆಗಳನ್ನು ಮುಚ್ಚಲು ಮಾಡಿರುವ ಆದೇಶವನ್ನು ತಕ್ಷಣ ಮರಳಿ ಪಡೆಯಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com