ಪೊಲೀಸ್ ಗುಂಡೇಟಿಗೆ ಬಲಿಯಾಗಿದ್ದ ವಿವೇಕ್ ಪತ್ನಿಗೆ ಕೆಲಸ ಕೊಟ್ಟ ಯೋಗಿ ಸರ್ಕಾರ..!

ಲಖನೌ: ಕಳೆದ ತಿಂಗಳು ಉತ್ತರ ಪ್ರದೇಶ ಪೊಲೀಸರಿಂದ ಹತ್ಯೆಗೀಡಾಗಿದ್ದ ಆ್ಯಪಲ್​ ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ವಿವೇಕ್​ ತಿವಾರಿ ಅವರ ಪತ್ನಿ ಕಲ್ಪನಾಗೆ, ಹೇಳಿದಂತೆ ರಾಜ್ಯ ಸರ್ಕಾರ ಇಂದು ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿ ತನ್ನ ಮಾತು ಉಳಿಸಿಕೊಂಡಿದೆ. ಕಲ್ಪನಾ ಅವರ ಮನೆಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ದಿನೇಶ್​ ಶರ್ಮಾ, ನಗರ ಪಾಲಿಕೆಯಲ್ಲಿ ವಿಶೇಷಾಧಿಕಾರಿಯಾಗಿ (ಒಎಸ್​ಡಿ) ಅವರಿಗೆ ಉದ್ಯೋಗ ಕಲ್ಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ದಿನೇಶ್​ ಶರ್ಮಾ ಅವರು, ನತದೃಷ್ಟ ಘಟನೆಯ ನಂತರ ನಾನು ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ವಿವೇಕ್​ ತಿವಾರಿ ಶ್ರಮಜೀವಿಯಾಗಿದ್ದರು. ಅವರ ಪತ್ನಿ ಕಲ್ಪನಾಗೆ ₹ 25 ಲಕ್ಷ, ಅವರ ಇಬ್ಬರು ಮಕ್ಕಳು ಮತ್ತು ತಾಯಿಗೆ ತಲಾ ₹ 5 ಲಕ್ಷ ಪರಿಹಾರ ಧನ ನೀಡಿದ್ದೇವೆ.
ಕಲ್ಪನಾ ನೇಮಕಾತಿ ಪ್ರಕ್ರಿಯೆನ್ನು ಇತ್ತೀಚೆಗೆ ಪೂರ್ಣಗೊಳಿಸಿದ್ದರು. ಹಾಗಾಗಿ ಇಂದು ಅವರಿಗೆ ನೇಮಕಾತಿ ಪತ್ರವನ್ನು ನೀಡಿದೆವು. ವಿವೇಕ್​ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಏನೆಲ್ಲ ನೆರವು ಕೊಡಬೇಕೋ ಅದಷ್ಟನ್ನೂ ನೀಡುತ್ತೇವೆ. ಸರ್ಕಾರ ಸದಾ ಅವರ ಕುಟುಂಬದೊಂದಿಗೆ ಇರುತ್ತದೆ ಎಂದು ಡಿಸಿಎಂ ದಿನೇಶ್​ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

ತನ್ನ ಪತಿ ಹತ್ಯೆ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ಬಗ್ಗೆ ನನಗೆ ತೃಪ್ತಿಯಿದೆ ಎಂದು ಕಲ್ಪನಾ ತಿವಾರಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಕಳೆದ ತಿಂಗಳು ನಗರದ ಹೊರವಲಯದಲ್ಲಿ ಗೋಮ್ತಿ ನಗರದಲ್ಲಿ ನಡುರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 38 ವರ್ಷದ ವಿವೇಕ್​ ತಿವಾರಿ ಅವರನ್ನು ಪೇದೆ ಪ್ರಶಾಂತ್ ಚೌಧರಿ ಗುಂಡಿಟ್ಟು ಹತ್ಯೆ ಮಾಡಿದ್ದರು ಎನ್ನಲಾಗಿದೆ. ಆದ್ರೆ ತಿವಾರಿ ತಮ್ಮ ಸೂಚನೆಯಂತೆ ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದಾಗ ತಿವಾರಿ ಅವರತ್ತ ಗುಂಡು ಹಾರಿಸಬೇಕಾಯಿತು ಎಂಬುದು ಪೇದೆ ಪ್ರಶಾಂತ್ ವಾದವಾಗಿದೆ. ಪ್ರಕರಣದಲ್ಲಿ ಸಂದೀಪ್​ ಕುಮಾರ್​ ಎಂಬ ಮತ್ತೊಬ್ಬ ಪೇದೆ ಹೆಸರೂ ಕೇಳಿಬಂದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.