ಮನೆಗೆ ಬೆಂಕಿ ಇಟ್ಟ ಪಾಪಿ ಹೇಳಿದ್ದು, ‘ಜಲಾಕೇ ರಾಖ್ ಕರ್ ದಿಯಾ’..!

ಕಲಬುರ್ಗಿ: ನಗರದ ಎಂಎಸ್​ಕೆ ಮಿಲ್​ನ ಇಕ್ಬಾಲ್ ಕಾಲೋನಿಯ ಮನೆಯೊಂದರಲ್ಲಿ ಅನುಮಾನಾಸ್ಪದವಾಗಿ ಬೆಂಕಿ ಹೊತ್ತಿಕೊಂಡು‌ ಇಬ್ಬರು ಮೃತಪಟ್ಟ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಮಹತ್ವದ ‌ಸುಳಿವುಗಳು ಸಿಕ್ಕಿದೆ.
ಮನೆಯ ಹಿಂಬದಿ ಬಾಗಿಲಿನಿಂದ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ‌‌ ಪರಾರಿಯಾಗಿದ್ದ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಲಬುರ್ಗಿ ‘ಎ’ ಉಪವಿಭಾಗದ ಎಎಸ್ಪಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಜುಲೈ 4ರಂದು ಆಟೋ ಚಾಲಕ ಸೈಯ್ಯದ್ ಅಕ್ಬರ್ ಮನೆಗೆ ಅಕ್ಬರ್ ತಂಗಿ ಹೀನಾ ಗಂಡ ಮುಸ್ತಫಾ ಬೆಂಕಿ ಇಟ್ಟಿದ್ದ. ಮನೆಯಲ್ಲಿ ಮಲಗಿದ್ದ ಸೈಯ್ಯದ್ ಅಕ್ಬರ್, ಪತ್ನಿ ಶಹನಾಜ್ ಬೇಗಂ ಮಕ್ಕಳಾದ ಮೊಹಮ್ಮದ್ ಯಾಸೀನ್ ಹಾಗೂ ಸಾನಿಯಾ ಗಂಭೀರವಾಗಿ ಗಾಯಗೊಂಡಿದ್ದರು.‌ ಚಿಕಿತ್ಸೆ ಫಲಿಸದೇ ಸೈಯ್ಯದ್ ಅಕ್ಬರ್ ಹಾಗೂ ಪತ್ನಿ ಶಹನಾಜ್ ಬೇಗಂ ಮೃತಪಟ್ಟಿದ್ದು, ಮಕ್ಕಳಾದ ಯಾಸೀನ್, ಸಾನಿಯಾ‌ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.
ಕೃತ್ಯದ ಹಿನ್ನೆಲೆ..!
ಮೃತ ಅಕ್ಬರ್​ನ ತಂಗಿ ಹೀನಾಳನ್ನು ಆರೋಪಿ ಮುಸ್ತಫಾ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ದುಶ್ಚಟಗಳ ದಾಸನಾಗಿದ್ದ ಮುಸ್ತಫಾ ಪ್ರತಿನಿತ್ಯ ಪತ್ನಿ ಹೀನಾ ಜೊತೆ ಜಗಳವಾಡುತ್ತಿದ್ದ ಎನ್ನಲಾಗ್ತಿದೆ. ಅಲ್ಲದೇ ಈ ಹಿಂದೆ ನಡೆದ ಹಲವು ಕಳ್ಳತನ ಪ್ರಕರಣಗಳಲ್ಲಿಯೂ‌ ಭಾಗಿಯಾಗಿದ್ದನಂತೆ. ಆರೋಪಿ‌ ಮುಸ್ತಫಾ‌ನ ಕಾಟ ತಾಳಲಾರದೇ ಪತ್ನಿ ಹೀನಾ ಆತನನ್ನು ಬಿಟ್ಟು ತನ್ನ ಅಕ್ಕಳ ಮನೆಯಲ್ಲಿ ವಾಸವಾಗಿದ್ದಳು. ಹೀಗೆಲ್ಲಾ ಪತ್ನಿ ಜೊತೆ ಮಾಡಬೇಡ, ಸರಿಯಾಗಿ ಸಂಸಾರ ಮಾಡಿಕೊಂಡು ಹೋಗು ಎಂದು ಮುಸ್ತಫಾಗೆ ಅಕ್ಬರ್ ಬುದ್ಧಿವಾದ ಹೇಳಿದ್ದ. ಇದರಿಂದ ಕುಪಿತಗೊಂಡ‌ ಆರೋಪಿ ಮುಸ್ತಫಾ ಪತ್ನಿಯ ಅಕ್ಬರ್ ಮನೆಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾನೆ. ಬಳಿಕ ಅಕ್ಬರ್ ಸಂಬಂಧಿಯೋರ್ವರಿಗೆ ಕರೆ ಮಾಡಿ ‘ಜಲಾಕೇ ರಾಖ್ ಕರ್ ದಿಯಾ ಬೋಲೋ’ ಎಂದು ತಾನು ಮಾಡಿದ್ದ ದುಷ್ಕೃತ್ಯವನ್ನು ವಿವರಿಸಿದ್ದ. ಸದ್ಯ ಈ ಆಡಿಯೋ ಕ್ಲಿಪ್ ಪೊಲೀಸರಿಗೆ ಲಭ್ಯವಾಗಿದೆ. ದುರಂತದಲ್ಲಿ ದಂಪತಿ ಮೃತಪಟ್ಟು ಅನಾಥರಾಗಿರುವ ಇಬ್ಬರ ಮಕ್ಕಳ‌ ಸ್ಥಿತಿಯೂ ಚಿಂತಾಜನಕವಾಗಿದೆ. ಪತ್ನಿ ಮೇಲಿನ ದ್ವೇಷಕ್ಕೆ ಪತ್ನಿಯ ಅಣ್ಣನ ಮನೆಗೆ ಬೆಂಕಿ ಇಟ್ಟ ಆರೋಪಿ ಮುಸ್ತಫಾಗೆ ಸಂಬಂಧಿಕರೆಲ್ಲರೂ ಹಿಡಿಶಾಪ ಹಾಕುತ್ತಿದ್ದಾರೆ. ತಮ್ಮದಲ್ಲದ ತಪ್ಪಿಗೆ ಮುಗ್ಧ ಮಕ್ಕಳಿಬ್ಬರು ತಂದೆ ತಾಯಿಯನ್ನೂ ಕಳೆದುಕೊಂಡು ಅನಾಥವಾಗಿ, ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv