‘ಜೆಟ್​’ಗಾಗಿ ಪ್ರಧಾನಿ ಕಚೇರಿಯಲ್ಲಿ ಅರ್ಜೆಂಟ್ ಮೀಟಿಂಗ್..!

ಜೆಟ್ ಏರ್​ವೇಸ್​ ಏಕಾಏಕಿ ತನ್ನ ವಿಮಾನ ಹಾರಾಟ ನಿಲ್ಲಿಸಿದ ಕಾರಣ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಂಕಷ್ಟವಾಗಿತ್ತು. ಈಗ ಅವರಿಗೆ ಸಹಾಯವೊದಗಿಸಲು ಕೇವಲ 11 ವಿಮಾನಗಳನ್ನ ಸ್ಥಳೀಯವಾಗಿ ಹಾಗೂ ಅಂತರಾಷ್ಟ್ರೀಯವಾಗಿ ಕಳುಹಿಸಲಾಗುವುದು ಅಂತ ಜೆಟ್ ಹೇಳಿದ ಬೆನ್ನಲ್ಲೇ ಸಂಘರ್ಷಗಳು ಮತ್ತಷ್ಟು ಹೆಚ್ಚಿವೆ. ಈ ಹಿನ್ನೆಲೆ ತ್ವರಿತ ಸಭೆ ನಡೆಸಿರೋ ಪ್ರಧಾನ ಮಂತ್ರಿ ಕಾರ್ಯಾಲಯ, ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದೆ.

ನಾಗರೀಕ ವಿಮಾನಯಾನ ಸಚಿವ ಸುರೇಶ್ ಪ್ರಭು ಈ ವಿಚಾರವಾಗಿ ಸಭೆ ಕರೆದಿದ್ದು, ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾಗೆ ಜೆಟ್​ ಏರ್​ವೇಸ್​​ಗೆ ಸಂಬಂಧಿಸಿದ ವಿಚಾರಗಳನ್ನ ಬಗೆಹರಿಸುವಂತೆ ಹೇಳಿದ್ದಾರೆ. ಪ್ರಧಾನಿ ಕಾರ್ಯಾಲಯದಲ್ಲಿ ನಡೆದ ಸಭೆ ಬಳಿಕ ಜೆಟ್ ಏರ್​ವೇಸ್​ ವ್ಯವಸ್ಥಾಪಕ ಸಿಬ್ಬಂದಿಯೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ ಖರೋಲಾ, ಈಗಾಗಲೇ 11 ವಿಮಾನಗಳು ಹಾರಾಟ ನಡೆಸಿವೆ. ವಾರಾಂತ್ಯದ ಎರಡು ದಿನ 6 ರಿಂದ 7 ವಿಮಾನಗಳು ಸ್ಥಳೀಯವಾಗಿ ಹಾರಾಟ ನಡೆಸಲಿವೆ. ಪ್ರಯಾಣಿಕರ ತೊಂದರೆಯನ್ನ ಬಗೆಹರಿಸಲಾಗುವುದು ಅಂತ ಹೇಳಿದ್ದಾರೆ.