ಬಡರೋಗಿಗಳ ಚಿಕಿತ್ಸೆಗೆ ಸಂಬಳವನ್ನ ಕೊಟ್ಟ ಜೆಡಿಎಸ್‌ ಎಂಎಲ್‌ಸಿ..!

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಅತ್ಯಂತ ಶ್ರೀಮಂತ ಸದಸ್ಯರಾಗಿರುವ ಜೆಡಿಎಸ್‌ನ ಬಿ.ಎಂ.ಫಾರೂಕ್ ತಮ್ಮ ವೇತನವನ್ನು ಬಡರೋಗಿಗಳ ಚಿಕಿತ್ಸೆಗೆ ನೀಡೋ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚುನಾವಣೆ ವೇಳೆ ಎಂ.ಬಿ.ಫಾರೂಕ್‌ ಸಲ್ಲಿಸಿರುವ ಅಫಿಡವಿಟ್‌ನಿಂದ ಈ ಮಾಹಿತಿ ಬಹಿರಂಗವಾಗಿದೆ. ಕ್ಯಾನ್ಸರ್‌ ರೋಗಿಗಳು, ಅನಾಥ ಮಕ್ಕಳಿಗೆ ವೇತನದ ಹಣವನ್ನು ನೀಡುತ್ತಿದ್ದಾರೆ. ಮಂಗಳೂರು ಮೂಲದ ಇಂಧನ ಉದ್ಯಮಿಯಾಗಿರುವ ಫಾರೂಕ್‌, ಪರಿಷತ್ ಸದಸ್ಯ ಸ್ಥಾನದಿಂದ ಪ್ರತಿ ತಿಂಗಳು ಒಂದು ಲಕ್ಷ ವೇತನ ಪಡೆಯುತ್ತಿದ್ದಾರೆ. ಆದ್ರೆ ಈ ಹಣವನ್ನು ಅವರು ಸ್ವಂತಕ್ಕಾಗಿ ಬಳಸದಿರಲು ನಿರ್ಧರಿಸಿರೋದು ವಿಶೇಷವಾಗಿದೆ.

ಪರಿಷತ್ ಸದಸ್ಯರಿಗೆ ಕೊಡುವ ಭತ್ಯದ ಹಣವನ್ನ ತಮ್ಮ ತಾಯಿ ಅಯೆಷಾ ಮೆಮೋರಿಯಲ್ ಟ್ರಸ್ಟ್‌ ಮೂಲಕ ಅನಾಥ ಹೆಣ್ಣುಮಕ್ಕಳಿಗೆ ನೀಡಲು ಮುಂದಾಗಿದ್ದಾರೆ. ಕ್ಯಾನ್ಸರ್ ಪೀಡಿತರು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಬಡ ಜನರಿಗೆ ಅವರ ಆಹಾರ ಮತ್ತು ಚಿಕಿತ್ಸಾ ವೆಚ್ಚಕ್ಕಾಗಿ ಬಳಕೆಗೆ ಹಣವನ್ನ ವಿನಿಯೋಗಿಸಲಾಗುತ್ತದೆ ಎಂದಿದ್ದಾರೆ. ಜೊತೆಗೆ ಅವರೇ ಸ್ವತಃ ಸ್ಲಂನಲ್ಲಿ ವಾಸಿಸುವ ಜನರ ಕಲ್ಯಾಣಕ್ಕಾಗಿ ಹ್ಯಾಪಿ ಲಿವಿಂಗ್ ಝೋನ್ ಎಂಬ ಯೋಜನೆಯನ್ನ ತರಲು ಮುಂದಾಗಿದ್ದಾರೆ. ಫಾರೂಕ್ ಅವರು ಕಳೆದ ಮೂರು ವರ್ಷಗಳಿಂದ ರಾಜ್ಯ ಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಆದ್ರೆ, ಇದೇ ಮೊದಲ ಬಾರಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರ ಒಟ್ಟು ಆಸ್ತಿಯ ಮೌಲ್ಯ ₹110 ಕೋಟಿಯಾಗಿದ್ದರೆ. ಅವರ ಪತ್ನಿಯ ಹೆಸರಿನಲ್ಲಿ 770 ಕೋಟಿ ಆಸ್ತಿ ಇರುವುದಾಗಿ ಅವರೇ ಘೋಷಿಸಿಕೊಂಡಿದ್ದಾರೆ.