ಮಂಡ್ಯ ಜೆಡಿಎಸ್‌ನಲ್ಲಿ ಮೂಲ ವರ್ಸಸ್‌ ವಲಸಿಗರ ಫೈಟ್‌!

ಮಂಡ್ಯ: ಮಂಡ್ಯ ಲೋಕಸಭಾ ಉಪ ಚುನಾವಣೆ ದಿನಾಂಕ ಘೋಷಣೆಯಾಗ್ತಿದ್ದಂತೆ, ಜೆಡಿಎಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಅದರಲ್ಲೂ ಪ್ರಜ್ವಲ್ ಮತ್ತು ನಿಖಿಲ್‌ ರೇಸ್‌ನಿಂದ ಹೊರಬಂದ ನಂತರವಂತೂ ಈ ಅಸಮಾಧಾನದ ಹೊಗೆ ಹೆಚ್ಚಾಗಿದೆ. ಜೊತೆಗೆ ದೇವೇಗೌಡರು ಈ ಬಾರಿ ಸ್ಥಳೀಯ ಮುಖಂಡರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿಕೆ ನೀಡಿದ ನಂತರ ಟಿಕೆಟ್ ಆಕಾಂಕ್ಷಿಗಳ ಕನಸುಗಳು ಚಿಗುರಿವೆ. ಈ ನಡುವೆ ಮಂಡ್ಯ ಜೆಡಿಎಸ್‌ನಲ್ಲಿ ಮೂಲ ಹಾಗೂ ವಲಸಿಗ ಮುಖಂಡರ ನಡುವೆ ತಿಕ್ಕಾಟ ಶುರುವಾಗಿದೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಂದಿರುವ ಶಿವರಾಮೇಗೌಡ ಅಥವಾ ಈಗ ತಾನೇ ಜೆಡಿಎಸ್‌ ಸೇರಿರುವ ಲಕ್ಷ್ಮೀ ಅಶ್ವಿನ್‌ ಗೌಡಗೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ ಅನ್ನೋ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮೂಲ ಮತ್ತು ವಲಸಿಗ ವಿಚಾರಕ್ಕೆ ಮಹತ್ವ ಪಡೆದುಕೊಂಡಿದೆ. ಇಂದು ವಲಸಿಗರಿಗೆ ಟಿಕೆಟ್​ ನೀಡಬಾರದು ಎಂದು ಸಿಎಂ ಕುಮಾರಸ್ವಾಮಿ ಕಟ್ಟಾ ಬೆಂಬಲಿಗ, ಜೆಡಿಎಸ್ ಮುಖಂಡ ನಲ್ಲಿಗೆರೆ ಬಾಲು ಆಗ್ರಹಿಸಿದ್ದಾರೆ.
‘ಶಿವರಾಮೇಗೌಡ ಕಾಂಗ್ರೆಸ್​ನಿಂದ ಬಂದವರು. ಇನ್ನು ಲಕ್ಷ್ಮೀ ಅಶ್ವಿನ್ ಗೌಡ ಜೆಡಿಎಸ್ ಸೇರಿ 2 ವರ್ಷವಾಗಿದೆ ಅಷ್ಟೇ. ಆದರೆ ನಾನು 20 ವರ್ಷದಿಂದ ಪಕ್ಷದಲ್ಲಿ ದುಡಿಯುತ್ತಿದ್ದೇನೆ. ನಾನು ರಾಜಕೀಯ ಸನ್ಯಾಸಿ ಅಲ್ಲ. ಸದಾ ಜನರ ಜೊತೆ ಇದ್ದೇನೆ. ವರಿಷ್ಠರು ಅವಕಾಶ ನೀಡಿದ್ರೆ ಸ್ಪರ್ಧೆ ಮಾಡುತ್ತೇನೆ’ ಎಂದು ಬಾಲು ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.