ರಾಜ್ಯದಲ್ಲಿ ಮೈತ್ರಿ ಸರ್ಕಾರ 6 ತಿಂಗಳಿದ್ರೆ ಅಚ್ಚರಿ ರೀ: ಈಶ್ವರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಮೈತ್ರಿ ಸರ್ಕಾರ 6 ತಿಂಗಳು ಆಡಳಿತದಲ್ಲಿದ್ದರೆ ಅದೇ ಅಚ್ಚರಿ. ಈ ಸರ್ಕಾರ ವಿಚಿತ್ರವಾಗಿ ಹುಟ್ಟಿದ ಮಗುವಿನಂತೆ ಹುಟ್ಟಿದೆ. ಹಾಗಾಗಿ ಇದು ಜಾಸ್ತಿ ದಿನ ಬದುಕುವುದಿಲ್ಲ ಎಂದು ಶಿವಮೊಗ್ಗ ನಗರ ಬಿಜೆಪಿ ಶಾಸಕ ಕೆ.ಎಸ್​. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೋದಿ ಅಲೆಯ ಭಯದಿಂದಾಗಿ ವಿರೋಧಿಗಳೆಲ್ಲರೂ ಒಂದಾಗಿದ್ದಾರೆ. ಯಾವ ಕಾರಣಕ್ಕೂ ನಮ್ಮ ಕಾರ್ಯಕರ್ತರು ಬೇಜಾರಾಗುವುದು ಬೇಡ. ಟಿವಿ, ಪತ್ರಿಕೆ, ಅಭ್ಯರ್ಥಿಗಳನ್ನು ನೋಡಿಕೊಂಡು ನಾವು ಕೆಲಸ ಮಾಡುತ್ತಿಲ್ಲ. ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಇನ್ನು ರಾಜ್ಯದಲ್ಲಿ ಯಾವಾಗ ಬೇಕಿದ್ದರೂ ಚುನಾವಣೆ ಬರಬಹುದು. ಹಾಗಾಗಿ ಕಾರ್ಯಕರ್ತರು ಜನರ ಮತ್ತು ಜನಪ್ರತಿನಿಧಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಎಲ್ಲರನ್ನೂ ನಮ್ಮೊಂದಿಗೆ ಸೇರಿಸಿಕೊಂಡು ಅವಕಾಶವಾದಿ ರಾಜಕಾರಣಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡ ಮೊದಲಾದವರಿಗೆ ಸರಿಯಾದ ಪಾಠ ಕಲಿಸಿ ಯಡಿಯೂರಪ್ಪರನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಈಶ್ವರಪ್ಪ ಕಾರ್ಯಕರ್ತರಿಗೆ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv