ಜಂತಕಲ್ ಮೈನಿಂಗ್ ಕೇಸ್ ವಿಚಾರಣೆ ಮುಂದೂಡಿಕೆ, ಹೆಚ್​​ಡಿಕೆ ಸದ್ಯ ಸೇಫ್

ಬೆಂಗಳೂರು: ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಸದ್ಯ ಸೇಫ್ ಆಗಿದ್ದಾರೆ. ನಿಗದಿಯಂತೆ ಪ್ರಕರಣದ ವಿಚಾರಣೆಯನ್ನ ನಾಳೆ ಸುಪ್ರೀಂಕೋರ್ಟ್​ ಕೈಗೆತ್ತಿಕೊಳ್ಳಬೇಕಿತ್ತು. ಆದ್ರೆ ಪ್ರಕರಣದ ವಿಚಾರಣೆಯನ್ನ ಸುಪ್ರೀಂ ಕೋರ್ಟ್​​​ ನವೆಂಬರ್ 14ಕ್ಕೆ ಮುಂದೂಡಿದೆ.

ಕಂಪ್ಯೂಟರ್ ಆಟೋ ಜನರೇಟಿಂಗ್​ ಸಿಸ್ಟಂನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ. ಸುಪ್ರಿಂ ಕೋರ್ಟ್ ಆದೇಶದಂತೆ ಜಂತಕಲ್ ಮೈನಿಂಗ್ ಕೇಸ್​​ನಲ್ಲಿ ಕುಮಾರಸ್ವಾಮಿ ಪಾತ್ರದ ಬಗ್ಗೆ ಎಸ್ಐಟಿ ತನಿಖೆ ಮಾಡಿತ್ತು. ಪ್ರಕರಣದಲ್ಲಿ ಕುಮಾರಸ್ವಾಮಿ ಪಾತ್ರದ ಬಗ್ಗೆ ಲೋಕಾಯುಕ್ತ ಎಸ್ಐಟಿ ತಂಡ, ಕೋರ್ಟ್​​​ಗೆ ವರದಿ ಸಲ್ಲಿಸಿತ್ತು.

ಏನಿದು ಜಂತಕಲ್ ಮೈನಿಂಗ್ ಕೇಸ್..?
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೆ ಕಂದವಾಡಿ ಗ್ರಾಮದಲ್ಲಿ 21/8/07 ರಿಂದ 14/2/2009ರ ವರೆಗೆ ನಡೆದಿದ್ದ ಮೈನಿಂಗ್ ಹಗರಣವಿದು. ಮುಂಬೈ ಮೂಲದ ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಕಂಪನಿ, 1965 ರಿಂದ 1985 ರ ತನಕ ಮ್ಯಾಂಗನೀಸ್ ಓರ್ ಮೈನಿಂಗ್ ನಡೆಸಿತ್ತು. 1985ರಲ್ಲಿ ಮೈನಿಂಗ್ ನಿಲ್ಲಿಸಲಾಗಿತ್ತು. ಪರಿಸರ ಹಾನಿ ಹಿನ್ನೆಲೆಯಲ್ಲಿ ಮೈನಿಂಗ್ ಇಲಾಖೆಯಿಂದ ಕಂಪನಿಯನ್ನು ಬ್ಲಾಕ್ ಲಿಸ್ಟ್​​ಗೆ ಹಾಕಲಾಗಿತ್ತು.

ಬ್ಲಾಕ್ ಲಿಸ್ಟ್​​ ನಲ್ಲಿದ್ದು, ಕೆಲ ವರ್ಷಗಳ ಕಾಲ ಮೈನಿಂಗ್ ನಡೆಸದೇ ಕಂಪನಿ ಸುಮ್ಮನಿತ್ತು. ಆದರೆ 2007 ರಲ್ಲಿ ಮೈನಿಂಗ್ ನಿಂದ ಹೊರ ಹಾಕಿದ್ದ ಮಣ್ಣು ಮತ್ತು ಧೂಳು ಪುನಃ ತೆಗೆದುಕೊಳ್ಳಲು ಪರವಾನಿಗೆ ನೀಡಲು ಜಂತಕಲ್​​ ಕಂಪನಿ ಮಾಲೀಕ ವಿನೋದ್ ಗೋಯಲ್​​ರಿಂದ ಮತ್ತೆ ಅರ್ಜಿ ಸಲ್ಲಿಕೆಯಾಗಿತ್ತು. 1 ಲಕ್ಷದ 17 ಸಾವಿರದ 800 ಮೆಟ್ರಿಕ್ ಟನ್ ಮಣ್ಣು ತೆಗೆದುಕೊಳ್ಳಲು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ, ಜಂತಕಲ್ ಪರವಾಗಿ ಸೆಂಟ್ರಲ್ ಮಿನಿಸ್ಟರಿ ಆಫ್ ಫಾರೆಸ್ಟ್ ಮತ್ತು ಎನ್ವಿರಾನ್ಮೆಂಟ್​​​ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಪರಿಸರ ಹಾನಿ ಕಾರಣ ನೀಡಿ ಗಂಗಾರಾಮ್ ಅರ್ಜಿ ತಿರಸ್ಕಾರವಾಗಿತ್ತು.