ರಾಮ್ ರಹೀಮ್ ಪತ್ರಕರ್ತನ ಹತ್ಯೆ ಪ್ರಕರಣದಲ್ಲೂ ಅಪರಾಧಿ..!

ಹರಿಯಾಣ: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂಘೋಷಿತ ದೇವಮಾನವ ಹಾಗೂ ಡೇರಾ ಸಚ್ಛಾ ಸೌದಾದ ಮುಖ್ಯಸ್ಥ ಬಾಬಾ ರಾಮ್ ರಹೀಮ್, ಪತ್ರಕರ್ತನ ಹತ್ಯೆ ಪ್ರಕರಣದಲ್ಲೂ ದೋಷಿ ಅಂತಾ ಹರಿಯಾಣದ ಸ್ಪೆಷಲ್​ ಕೋರ್ಟ್​ ತೀರ್ಪು ನೀಡಿದೆ. ಈ ಮೂಲಕ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ರಾಮ್ ರಹೀಮ್ ಪಾತ್ರ ಇರೋದು ಸಾಬೀತಾಗಿದೆ. ಅಲ್ಲದೇ ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳೂ ಅಪರಾಧಿ ಅಂತಾ ಕೋರ್ಟ್​ ಹೇಳಿದ್ದು, ಜನವರಿ 17 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. 2002ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿಯ ಹತ್ಯೆ ಮಾಡಲಾಗಿತ್ತು. ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಹರಿಯಾಣದ ಪಂಚಕುಲದ ಸ್ಪೆಷಲ್ ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಸಿದ್ದರು. 51 ವರ್ಷದ ರಾಮ್ ರಹೀಮ್, ಈಗಾಗಲೇ ತನ್ನ ಇಬ್ಬರು ಶಿಷ್ಯೆಯಂದಿರ ಮೇಲೆ ಅತ್ಯಾಚಾರವೆಸಗಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಸದ್ಯ ರೋಹ್ಟಕ್​ನ ಸುನಾರಿಯಾ ಜೈಲಿನಲ್ಲಿ ರಾಮ್​ ರಹೀಮ್ ಶಿಕ್ಷೆ ಅನುಭವಿಸುತ್ತಿದ್ದಾನೆ.