ಬೈ ಎಲೆಕ್ಷನ್ ಘೋಷಣೆಯಾಗಿರೋದು ವೇಸ್ಟ್ ಆಫ್ ಮನಿ: ಶೆಟ್ಟರ್​

ಹುಬ್ಬಳ್ಳಿ: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಕೇವಲ 6 ತಿಂಗಳಿರುವಾಗ ಬೈ ಎಲೆಕ್ಷನ್ ಘೋಷಣೆ ಮಾಡಿರೋದು ವೇಸ್ಟ್ ಆಫ್ ಮನಿ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅಭಿಪ್ರಾಯ ಪಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಲೋಕಸಭೆಯ 3 ಸ್ಥಾನಗಳಿಗೆ ಬೈ ಎಲೆಕ್ಷನ್ ನಡೆಸುವ ಬಗ್ಗೆ ಚುನಾವಣಾ ಆಯೋಗ ಪ್ರ್ಯಾಕ್ಟಿಕಲ್​​ ಆಗಿ ಯೋಚಿಸಬೇಕಿತ್ತು. ಈಗ ಚುನಾವಣೆ ಘೋಷಣೆ ಮಾಡಬಾರದಿತ್ತು, ಮಾಡಿಬಿಟ್ಟಿದ್ದಾರೆ. ಒಟ್ಟಾರೆ ಈ ಉಪಚುನಾವಣೆ ಎದುರಿಸೋಕೆ ಬಿಜೆಪಿ ಸನ್ನದ್ಧವಾಗಿದೆ. 2 ವಿಧಾನಸಭೆ, 3 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಖಂಡಿತಾ ಗೆಲ್ಲುತ್ತದೆ ಎಂದು ಜಗದೀಶ್ ಶೆಟ್ಟರ್​ ಭವಿಷ್ಯ ನುಡಿದರು.
ಲೋಕಾ ಸಂಸ್ಥೆ ನ್ಯಾಯಾಲಯದ ಕದ ತಟ್ಟಿದ ವಿಚಾರವಾಗಿ ಮಾತನಾಡಿದ ಶೆಟ್ಟರ್​, ತನಗಿದ್ದ ಅಧಿಕಾರ ಮರಳಿ ನೀಡುವಂತೆ ಕರ್ನಾಟಕ ಲೋಕಾಯುಕ್ತ ಸಂಸ್ಥೆ ನ್ಯಾಯಾಲಯದ ಕದ ತಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಯನ್ನ ಹಲ್ಲು ಕಿತ್ತ ಹಾವಿನ ತರಹ ಮಾಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿ, ಎಸಿಬಿಯನ್ನ ಅಸ್ತಿತ್ವಕ್ಕೆ ತಂದಿದ್ದರು. ಸಿದ್ದರಾಮಯ್ಯ ತಮ್ಮ ಮೇಲೆ ಇರುವ 60-70 ಕೇಸ್ ಮುಚ್ಚಿಹಾಕಲು ಎಸಿಬಿ ಸ್ಥಾಪನೆ ಮಾಡಿದ್ದರು ಎಂದು ಜಗದೀಶ್​ ಶೆಟ್ಟರ್​ ಗಂಭೀರ ಆರೋಪ ಮಾಡಿದರು.
ಅಧಿಕಾರಕ್ಕೆ ಬರುವ ಮುನ್ನ ಸಿಎಂ ಕುಮಾರಸ್ವಾಮಿ, ತಮ್ಮ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬೋದಾಗಿ ಹೇಳಿದ್ರು. ಈವರೆಗೂ ಆ ಕೆಲಸ ಆಗದೇ ಇರೋದು ದುರ್ದೈವದ ಸಂಗತಿ. ಬಹುಶಃ ಅವರಿಗೆ ಲೋಕಾಯುಕ್ತ ಸಂಸ್ಥೆ ಬೇಕಾದಂತೆ ಕಾಣುತ್ತಿಲ್ಲ. ಬಿಜೆಪಿ ಮಾತ್ರ ಲೋಕಾಯುಕ್ತ ಸಂಸ್ಥೆಗೆ ಬಲ ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿತ್ತು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv