ಕೆಫೆಯಲ್ಲಿ ಆಟವಾಡಲು ಸಿಗುತ್ತೆ ಜೀವಂತ ಸಿಂಹ, ಎಲ್ಲಿ ಅಂತೀರಾ…?

ಇಸ್ತಾನ್‌ಬುಲ್‌: ಸಿಂಹವನ್ನ ಕಾಡಲ್ಲಿ ನೋಡಿರ್ತಿರ, ಇಲ್ಲ ಝೂ ಅಥವಾ ಸರ್ಕಸ್‌ನಲ್ಲಿ ನೋಡಿರ್ತಿರ. ಆದರೆ ಕಾಫಿ, ಟೀ, ಊಟ ತಿಂಡಿ ತಿನ್ನುವಂತಹ ಕೆಫೆಯಲ್ಲಿ ನೋಡಿದ್ದೀರಾ?, ಸಾಧ್ಯವೇ ಇಲ್ಲ. ಆದ್ರೆ ಟರ್ಕಿ ದೇಶದ ಇಸ್ತಾಂಬುಲ್‌ನಲ್ಲಿರುವ ಕೆಫೆಗೆ ಬರುವ ಗ್ರಾಹಕರಿಗೆ ಹುಲಿ, ಸಿಂಹ ಹಾಗೂ ಪಕ್ಷಿಗಳೇ ಆಕರ್ಷಣೆ. ಸಿಂಹವನ್ನ ಕೆಫೆಯಲ್ಲಿನ ಗಾಜಿನ ಬೋನಿನೊಳಗೆ ಕೂಡಿ ಹಾಕಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹಾಗೇ ಭಾರೀ ವಿರೋಧಕ್ಕೂ ಕಾರಣವಾಗಿದೆ.

ಮೆವ್ ಝೂ ಎಂಬ ಹೆಸರಿನ ಕೆಫೆ ಇದಾಗಿದ್ದು, ಅಲ್ಲಿ ಸಿಂಹವನ್ನ ಗಾಜಿನ ಬೋನಿನೊಳಗೆ ಇಡಲಾಗಿದೆ. ಚಿಕ್ಕ ಮಗುವೊಂದು ಗಾಜಿನೊಳಗೆ ಇರುವ ಸಿಂಹದ ಜೊತೆ ಆಟವಾಡುತ್ತಿರುವ ವಿಡಿಯೋವನ್ನ ಕೆಫೆ ತನ್ನ ಇನ್ಸ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನ ನೋಡಿದ ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಫೆ ವಿರುದ್ಧ ಆನ್‌ಲೈನ್‌ ಮೂಲಕ ದೂರನ್ನು ಸಲ್ಲಿಸಿದ್ದಾರೆ. ಗಾಜಿನ ಬೋನಿನಲ್ಲಿರುವ ಪ್ರಾಣಿಗಳನ್ನ ಅದರಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಕೆಫೆ ಸಿಂಹವಷ್ಟೇ ಅಲ್ಲ, ಎರಡು ಮೊಸಳೆಗಳು, 35 ಮೊಲಗಳು, ಹಲವಾರು ಫ್ಲೆಮಿಂಗೋಗಳು, ನಾಲ್ಕು ಹಾವುಗಳು, ನಾಲ್ಕು ಕುದುರೆಗಳು, ಎರಡು ಗಿಳಿಗಳು ಹಾಗೂ ಒಂದು ಇಗುವಾನಾ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.  ಮಾಲೀಕರು ಅಗತ್ಯ ದಾಖಲೆಗಳನ್ನ ಹೊಂದಿರೋ ಕಾರಣ ಇಲ್ಲಿ ಪ್ರಾಣಿಗಳನ್ನ ಇರಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಕೆಫೆ ಕೆಳಗೆ ಝೂ ಇದ್ದು ಅರಣ್ಯ ಇಲಾಖೆಯಡಿ ರೆಜಿಸ್ಟರ್​​ ಕೂಡ ಆಗಿದೆ. ಆದ್ರೆ ಸಿಂಹಗಳನ್ನ ನೋಡುವಂತೆ ಹಾಕಲಾಗಿರೋ ಗಾಜಿನ ಗೋಡೆಯನ್ನು ಮೂರು ತಿಂಗಳೊಳಗೆ ತೆಗೆಯಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಪ್ರಾಣಿಗಳನ್ನ ಈ ರೀತಿ ಕೂಡಿಹಾಕಿ ಅವುಗಳಿಗೆ ನೀಡುತ್ತಿರುವ ಹಿಂಸೆಗೆ ಅಲ್ಲಿನ ಜನರಿಂದ ಭಾರೀ ವಿರೋಧ ವ್ಯಕ್ತವಾದ ಮೇಲೆ ಆ ಕೆಫೆಯನ್ನ ಬಂದ್‌ ಮಾಡಲಾಗಿದೆ . ಹಾಗೇ ಸಿಂಹವನ್ನು ಇರಿಸಲಾಗಿದ್ದ ಗಾಜಿನ ಬೋನ್​​ ಕೂಡ ಕ್ಲೋಸ್​ ಮಾಡಲಾಗಿದೆ ಎಂದು ವರದಿಯಾಗಿದೆ.