ಮತ್ತೊಂದು ಐತಿಹಾಸಿಕ ಸಾಧನೆಗೆ ಮುಂದಾದ ‘ಇಸ್ರೋ’

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಮತ್ತೊಂದು ಐತಿಹಾಸಿಕ ಸಾಧನೆಗೆ ಮುಂದಾಗಿದೆ. ಮುಂಬರುವ ಏಪ್ರಿಲ್​ನಲ್ಲಿ ಮಹತ್ವದ ಚಂದ್ರಯಾನ-2 ನೌಕೆ ಉಡಾವಣೆ ಹಾಗೂ ಮೂವರು ಗಗನಯಾತ್ರಿಗಳನ್ನು 2021ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಸಿದ್ಧತೆ ನಡೆಸಿದೆ.

ಈ ಕುರಿತಂತೆ ನಗರದ ಇಸ್ರೋ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ. ಸಿವನ್, ಚಂದ್ರನ ಕುರಿತ ಇನ್ನಷ್ಟು ಮಾಹಿತಿ ಕಲೆ ಹಾಕುವುದು, ನೀರಿನ ಗಡ್ಡೆಗಳ ಇರುವಿಕೆ, ಖನಿಜ ನಿಕ್ಷೇಪ, ರಾಸಾಯನಿಕಗಳ ಲಭ್ಯತೆ ಕುರಿತ ಸಂಶೋಧನೆ ನಡೆಸುವುದೇ ಚಂದ್ರಯಾನ-2 ಯೋಜನೆಯ ಉದ್ದೇಶವಾಗಿದೆ. ಫೆಬ್ರವರಿ ತಿಂಗಳಲ್ಲಿ ಚಂದ್ರಯಾನ-2 ನೌಕೆಯನ್ನು ಉಡಾವಣೆ ಮಾಡಬೇಕಿತ್ತು. ಆದರೆ ಕೆಲವು ಅಗತ್ಯ ಪರೀಕ್ಷೆಗಳನ್ನು ನಡೆಸುವುದು ಬಾಕಿ ಇರುವುದರಿಂದ ಏಪ್ರಿಲ್​ಗೆ ಚಂದ್ರಯಾನ-2 ಯೋಜನೆ ನಡೆಸಲಿದ್ದೇವೆ. ಈ ಯೋಜನೆಯ ಅಂತಿಮ‌ ಪರೀಕ್ಷೆಗಳು ಇದೇ ಮಾರ್ಚ್ 25 ರಿಂದ ಏಪ್ರಿಲ್ ವರೆಗೆ ನಡೆಯಲಿವೆ ಎಂದು ತಿಳಿಸಿದ್ರು.

ಇದೇ ವೇಳೆ, ಗಗನಯಾನ ಯೋಜನೆಗೆ ಕೇಂದ್ರ ಸರ್ಕಾರ 30 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಿದೆ. ಎರಡು ಮಾನವ ರಹಿತ ಗಗಗಯಾನ ಯೋಜನೆಗಳು 2020ರ ಡಿಸೆಂಬರ್ ಮತ್ತು 2021ರ ಜುಲೈ ತಿಂಗಳಲ್ಲಿ ನಡೆಸಲಾಗುತ್ತದೆ. ಬಳಿಕ ಮಾನವ ಸಹಿತ ಗಗನಯಾನ ಯೋಜನೆಯನ್ನು 2021ರ ಡಿಸೆಂಬರ್ ತಿಂಗಳಲ್ಲಿ ಕೈಗೆತ್ತಿಕೊಳ್ಳಲಿದ್ದೇವೆ ಅಂತಾ ತಿಳಿಸಿದರು. ಈ ಯೋಜನೆಯಲ್ಲಿ ಮೂವರು ಆಸ್ಟ್ರೋನಾಟ್​​​ಗಳನ್ನು ಬಾಹ್ಯಾಕಾಶಕ್ಕೆ ಕಳಿಹಿಸಲಾಗುತ್ತದೆ. ಇವರು ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಅಧ್ಯಯನ, ಸಂಶೋಧನೆ ನಡೆಸಲಿದ್ದಾರೆ. ಗಗನಯಾನ ಯೋಜನೆಯಿಂದ ಒಟ್ಟಾರೆ 20 ಸಾವಿರ ಉದ್ಯೋಗಗಳು ಸೃಷ್ಟಿಯಾಗುತ್ತದೆ ಅಂತಾ ಕೆ.ಸಿವನ್ ತಿಳಿಸಿದ್ರು.