ಸತತ 5ನೇ ಬಾರಿಗೆ ಇಸ್ರೇಲ್ ಪ್ರಧಾನಿಯಾಗಿ ಬೆಂಜಮಿನ್ ನೇತನ್​ಯಾಹು ದಾಖಲೆ

ಜೆರುಸಲೆಂ: ಭಾರತದಲ್ಲಿ ಸಂಸದೀಯ ಚುನಾವಣೆಗೆ ನಾಳೆ ಮೊದಲನೇ ಹಂತದ ಮತದಾನ ನಡೆಯಲಿದೆ. ಪ್ರಧಾನಿ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಬೇಕು ಅಂತ ಬಿಜೆಪಿ ಪ್ರಚಾರ ನಡೆಸುತ್ತಿದೆ. ಇದು ನಮ್ಮ ದೇಶದ ಕಥೆಯಾದ್ರೆ ಅತ್ತ ಇಸ್ರೇಲ್​​ನಲ್ಲಿ ಬೆಂಜಮಿನ್ ನೇತನ್​ಯಾಹೂ ಸತತ 5ನೇ ಬಾರಿಗೆ ಇಸ್ರೇಲ್​​​ ನ್ಯಾಷನಲ್​ ಎಲೆಕ್ಷನ್​​ನಲ್ಲಿ ಜಯಭೇರಿ ಬಾರಿಸಿ ದಾಖಲೆ ಬರೆದಿದ್ದಾರೆ.

ಈ ಬಾರಿ ಬೆನ್ನಿ ಗ್ಯಾಂಟ್ಸ್​​​ ಜೊತೆಗಿನ ನೆಕ್​​ ಟು ನೆಕ್​​ ಫೈಟ್​ನಲ್ಲಿ ಬೆಂಜಮಿನ್ ಚುನಾವಣೆ ಗೆದ್ದಿದ್ದಾರೆ. ಶೇ. 97ರಷ್ಟು ಮತ ಎಣಿಕೆ ಮುಗಿದರೂ ಈ ಇಬ್ಬರು ನಾಯಕರಲ್ಲಿ ಯಾರ ಪಕ್ಷವೂ ಬಹುಮತ ಪಡೆದಿರಲಿಲ್ಲ. ಆದ್ರೆ ನೇತನ್​​ಯಾಹು ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಮೇಲುಗೈ ಹೊಂದಿದ್ದು, ಅವರೇ ಪ್ರಧಾನಿಯಾಗಿ ಮುಂದುವರೆಯಲು ಹಾದಿ ಸಲೀಸಾಗಿದೆ. ಹೀಗಾಗಿ ಅವರೇ ಈ ಚುನಾವಣೆ ಗೆದ್ದಿದ್ದಾರೆ ಎಂದು ಇಲ್ಲಿನ ಮೂರು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

ಚುನಾವಣೆಯಲ್ಲಿ ನೇತನ್​ಯಾಹೂ ಅವರ ಲೈಕುಡ್​ ಪಾರ್ಟಿ ಹಾಗೂ ಗ್ಯಾಂಟ್ಸ್​ ಅವರ ಹೊಸ ಸೆಂಟ್ರಿಸ್ಟ್​​ ಬ್ಲೂ ಆ್ಯಂಡ್​​ ವೈಟ್​​ ಪಾರ್ಟಿ ಎರಡೂ 35 ಸೀಟ್​​ಗಳನ್ನ ಗೆದ್ದಿವೆ. ಈಗ ಲೈಕುಡ್​​ ಪಾರ್ಟಿ ಇತರೆ ಪಕ್ಷಗಳೊಂದಿಗೆ ಮೃತ್ರಿ ಮಾಡಿಕೊಳ್ಳಲು ಮುಂದಾಗಿದ್ದು, 5 ಸೀಟ್​​ಗಳನ್ನ ಗಳಿಸಲಿದೆ. ಶುಕ್ರವಾರದ ವೇಳೆಗೆ ಅಂತಿಮ ಫಲಿತಾಂಶ ಬರಲಿದೆ.

ಮೈತ್ರಿಯೊಂದಿಗೆ ನೆತನ್​ಯಾಹೂ ಅಧಿಕಾರ ಹಿಡಿದರೆ, ಇಸ್ರೇಲ್​​ನ 71 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿಯಾಗಲಿದ್ದಾರೆ. ಈಗಾಗಲೇ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ನೇತನ್​ಯಾಹೂ ಹೇಳಿದ್ದಾರೆ. 2009ರಿಂದ ನೇತನ್​ಯಾಹೂ ಇಸ್ರೇಲ್​​ ಪ್ರಧಾನಿಯಾಗಿದ್ದಾರೆ. 3 ಭ್ರಷ್ಟಾಚಾರ ಪ್ರಕರಣಗಳಲ್ಲಿ ನೇತನ್​ಯಾಹೂ ಆರೋಪ ಎದುರಿಸುತ್ತಿದ್ದು, ಎಲ್ಲ ಆರೋಪಗಳನ್ನ ತಳ್ಳಿಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆ ಮಹತ್ವ ಪಡೆದುಕೊಂಡಿತ್ತು.

ಇನ್ನು ಎಕ್ಸಿಟ್​​ ಪೋಲ್ಸ್​​ ಆಧರಿಸಿ ಪ್ರತಿಸ್ಪರ್ಧಿ ಗ್ಯಾಂಟ್ಸ್​ ನಿನ್ನೆ, ತಮ್ಮ ಪಕ್ಷ ಲೈಕುಡ್​ ಪಕ್ಷಕ್ಕಿಂತ ಹೆಚ್ಚು ಸೀಟ್​​ಗಳನ್ನ ಗೆದ್ದಿದೆ. ನಾವೇ ಜಯಶಾಲಿಗಳು ಎಂದು ಹೇಳಿದ್ದರು. ನಿನ್ನೆ ರಾತ್ರಿ ಇಬ್ಬರೂ ನಾಯಕರು ನಾವು ಗೆದ್ದಿದ್ದೇವೆ ಎಂದು ಹೇಳಿಕೊಂಡರಾದರೂ, ಇಂದು ಬೆಳಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದ್ದು, ನೇತನ್​ಯಾಹೂ ಅವರೇ ಜಯಶಾಲಿ ಎಂದು ತೋರಿಸಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv