ಹಿಜಾಬ್​ ಧರಿಸದೇ ಡ್ಯಾನ್ಸ್ ಮಾಡಿದ್ದಕ್ಕೆ ಅರೆಸ್ಟ್, ಅಂಥದ್ದೇ ವಿಡಿಯೋ ಹಾಕಿ ಯುವತಿಯರಿಂದ ಪ್ರೊಟೆಸ್ಟ್..!

ಹಿಜಾಬ್​​​ ಧರಿಸದೇ ಡ್ಯಾನ್ಸ್​ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಕ್ಕೆ ಇರಾನ್​​ನಲ್ಲಿ​​​​ ಯುವತಿಯೊಬ್ಬಳನ್ನ ಅರೆಸ್ಟ್​ ಮಾಡಲಾಗಿದೆ. 18 ವರ್ಷ ವಯಸ್ಸಿನ ಮೆಡಾ ಹೊಜಾಬ್ರಿ ಬಂಧಿತ ಯುವತಿ. ಈಕೆಗೆ ಇನ್ಸ್​​ಟಾಗ್ರಾಂನಲ್ಲಿ 51 ಸಾವಿರ ಫಾಲೋವರ್ಸ್​​ ಇದ್ದಾರೆ. ಈಕೆ ತನ್ನ ಫೋಟೋಗಳು ಹಾಗೂ ವೆಸ್ಟರ್ನ್​ ಮತ್ತು ಇರಾನಿಯನ್​​ ಹಾಡಿಗೆ ಡ್ಯಾನ್ಸ್​ ಮಾಡಿದ ವಿಡಿಯೋಗಳನ್ನ ಪೋಸ್ಟ್​ ಮಾಡುತ್ತಿರುತ್ತಾಳೆ.

ಶುಕ್ರವಾರದಂದು ಇರಾನಿಯನ್​​ ರಾಜ್ಯ ವಾಹಿನಿಯಲ್ಲಿ ಈಕೆಯ ಬಗ್ಗೆ ವರದಿಯೊಂದನ್ನ ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಹೊಜಾಬ್ರಿ, ತಾನು ನೈತಿಕ ನಡಾವಳಿಗಳನ್ನ ಬ್ರೇಕ್​ ಮಾಡುತ್ತಿರೋದನ್ನ ಒಪ್ಪಿಕೊಂಡಿದ್ದಳು. ಆದ್ರೆ ಇದು ನನ್ನ ಉದ್ದೇಶವಲ್ಲ, ಹೆಚ್ಚಿನ ಫಾಲೋವರ್ಸ್ ಪಡೆಯಲು ಈ ರೀತಿ ಮಾಡ್ತಿದ್ದೀನಿ ಎಂದಿದ್ದಳು. ಆಕೆಯ ಈ ಬಹಿರಂಗ ಹೇಳಿಕೆ ಹಿಂದೆ ಯಾರದ್ದಾದ್ರೂ ಒತ್ತಡವಿತ್ತಾ ಅನ್ನೋ ಬಗ್ಗೆಯೂ ಇಲ್ಲಿನ ಮಾಧ್ಯಮಗಳು ಪ್ರಶ್ನೆ ಎತ್ತಿವೆ.

ಸದ್ಯಕ್ಕೆ ಯುವತಿಯನ್ನ ಅರೆಸ್ಟ್​ ಮಾಡಲಾಗಿದ್ದು, ಇದಕ್ಕೆ ಖಂಡನೆ ಕೂಡ ವ್ಯಕ್ತವಾಗಿದೆ. ಹಲವಾರು ಇರಾನಿಯನ್​ ಮಹಿಳೆಯರು ಹಿಜಾಬ್​ ಧರಿಸದೇ ಡ್ಯಾನ್ಸ್​ ಮಾಡಿದ ವಿಡಿಯೋವನ್ನು ಪೋಸ್ಟ್​ ಮಾಡುವ ಮೂಲಕ ಪ್ರತಿಭಟಿಸುತ್ತಿದ್ದಾರೆ. ಇರಾನ್​​ನಲ್ಲಿ ಈಗಾಗಲೇ ಫೇಸ್​​ಬುಕ್​​​, ಟ್ವಿಟರ್​, ಯೂಟ್ಯೂಬ್​​​​​​​​, ಟೆಲಿಗ್ರಾಮ್​ ಸೇರಿದಂತೆ ಸಾಕಷ್ಟು ಸಾಮಾಜಿಕ ಜಾಲತಾಣಗಳನ್ನ ​​ ಬ್ಲಾಕ್​ ಮಾಡಲಾಗಿದೆ. ಆದ್ರೂ ಲಕ್ಷಾಂತರ ಜನ ಪ್ರಾಕ್ಸಿ ಅಥವಾ ವಿಪಿಎನ್​​ ಮೂಲಕ ಈ ಜಾಲತಾಣಗಳನ್ನ ಬಳಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv