ಐಪಿಎಲ್​ನಲ್ಲಿ ಚೆನ್ನಾಗಿ ಆಡಿದ್ರೂ ವಿಶ್ವಕಪ್​ ಚಾನ್ಸ್ ಸಿಗೋದು ಡೌಟ್..!

ವಿಶ್ವಕಪ್​ಗೆ ಏಪ್ರಿಲ್ 15ರಂದು ಟೀಂ ಇಂಡಿಯಾ ಆಟಗಾರರ ಪಟ್ಟಿ ಮುಂಬೈನಲ್ಲಿ ಪ್ರಕಟಗೊಳ್ಳಲಿದೆ. ಆದ್ರೆ ಆಟಗಾರರ ಐಪಿಎಲ್​ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡುವುದಿಲ್ಲ ಅಂತಾ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್ ಹೇಳಿದ್ದಾರೆ. ​20 ಓವರ್​ಗಳಲ್ಲಿ ಆಟಗಾರರು ತೋರುವ ಪ್ರದರ್ಶನಕ್ಕೂ 50 ಓವರ್​ಗಳ ಮ್ಯಾಚ್​ಗೂ ತುಂಬಾ ಬದಲಾವಣೆಯಿದೆ. ಕಳೆದ 4 ವರ್ಷಗಳಲ್ಲಿ ಸಾಕಷ್ಟು ಏಕದಿನ ಪಂದ್ಯಗಳನ್ನಾಡಿದ್ದೇವೆ. ಅದರ ಆಧಾರದ ಮೇಲೆ ಉತ್ತಮ ತಂಡ ಆಯ್ಕೆ ಮಾಡುತ್ತೇವೆ ಅಂತಾ ಪ್ರಸಾದ್ ಹೇಳಿದ್ದಾರೆ. ಹೀಗಾಗಿ ಕೆಲ ಆಟಗಾರರು ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ವಿಶ್ವಕಪ್​ ತಂಡಕ್ಕೆ ಸೇರುವ ಅದೃಷ್ಟ ಕಳೆದುಕೊಳ್ಳಲಿದ್ದಾರೆ.

ಏಪ್ರಿಲ್ 15ರಂದು ವಿರಾಟ್ ಕೊಹ್ಲಿ ನೇತೃತ್ವದ ಆರ್​ಸಿಬಿ, ಮುಂಬೈ ಇಂಡಿಯನ್ಸ್​ ವಿರುದ್ಧ ಪಂದ್ಯವಾಡಲಿದೆ. ಈ ವೇಳೆ ಕೊಹ್ಲಿ ಕೂಡ ಮುಂಬೈನಲ್ಲಿ ಇರಲಿರುವುದರಿಂದ ಟೀಂ ಇಂಡಿಯಾ ಆಯ್ಕೆ ವೇಳೆ ಕೊಹ್ಲಿ ಕೂಡ ಭಾಗಿಯಾಗಲಿದ್ದಾರಂತೆ. ಐಪಿಎಲ್ ಆರಂಭಕ್ಕೂ ಮುನ್ನ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ಐಪಿಎಲ್ ಪ್ರದರ್ಶನ ವಿಶ್ವಕಪ್ ಆಯ್ಕೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದಿದ್ದರು.