ಐಪಿಎಲ್​ 12ರ ಫೈನಲ್ ಪಂದ್ಯ ಚೆನ್ನೈನಿಂದ ಹೈದ್ರಾಬಾದ್​ಗೆ ಶಿಫ್ಟ್​​..!

ಈ ಬಾರಿಯ ಐಪಿಎಲ್​ ಪ್ಲೇ ಆಫ್​ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಫೈನಲ್ ಪಂದ್ಯ ಚೆನ್ನೈನಿಂದ ಹೈದ್ರಾಬಾದ್​ಗೆ ಶಿಫ್ಟ್​ ಆಗಿದೆ. ಮೇ 12 ರಂದು ಹೈದ್ರಾಬಾದ್​ನ ರಾಜೀವ್​ಗಾಂಧಿ ಸ್ಟೇಡಿಯಂ ಫೈನಲ್ ಪಂದ್ಯಕ್ಕೆ ಆತಿಥ್ಯವಹಿಸಲಿದೆ. ಚೆನ್ನೈನ ಚಿದಂಬರಂ ಅಂಗಳದಲ್ಲಿ ಖಾಲಿ ಬಿಟ್ಟಿರುವ ಐ,ಜೆ,ಕೆ ಸ್ಟ್ಯಾಂಡ್ ತೆರೆಯಲು ಅನುಮತಿ ಸಿಗದ ಕಾರಣ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ಆದ್ರೆ ಮೇ 7 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ಚೆನ್ನೈನಲ್ಲೇ ನಡೆಯಲಿದೆ.ಮೇ 8 ರಂದು ನಡೆಯುವ ಎರಡನೇ ಕ್ವಾಲಿಫೈಯರ್ ಹಾಗು 10 ರಂದು ನಡೆಯುವ ಎಲಿಮಿನೇಟರ್ ಪಂದ್ಯಕ್ಕೆ, ಆಂಧ್ರದ ವಿಶಾಖಪಟ್ಟಣ ಅಂಗಳ ವೇದಿಕೆಯಾಗಲಿದೆ.ಐಪಿಎಲ್​ ನಿಯಮಾವಳಿ ಪ್ರಕಾರ, ಯಾವ ತಂಡಗಳು ಹಿಂದಿನ ಸೀಸನ್​ನಲ್ಲಿ ಚಾಂಪಿಯನ್​ ಹಾಗು ರನ್ನರ್ ಅಫ್​ ಆಗಿರುತ್ವೋ, ಆ ತಂಡಗಳ ತವರಿನ ಅಂಗಳದಲ್ಲಿ ಕ್ವಾಲಿಫೈಯರ್ ಹಾಗು ಎಲಿಮಿನೇಟರ್ ಪಂದ್ಯಗಳನ್ನ ನಡೆಸಬೇಕು.ಆದರೆ ಹೈದ್ರಾಬಾದ್​​ನಲ್ಲಿ ಸ್ಥಳೀಯ ಚುನಾವಣೆ ಇರುವುದರಿಂದ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆ ಬಿಸಿಸಿಐಗೆ ತಿಳಿಸಿದೆ. ಹೀಗಾಗಿ ವೈಜಾಗ್​ನಲ್ಲಿ ಪಂದ್ಯಗಳನ್ನ ನಡೆಸಲು ಬಿಸಿಸಿಐ ನಿರ್ಧರಿಸಿದೆ.