ಬಾವಿ ನೀರಿಗೆ ವಿಷ ಬೆರೆಸಿದ್ದ ಆರೋಪಿ ಬಂಧನ

ಯಾದಗಿರಿ: ಬಾವಿಯ ನೀರಿಗೆ ವಿಷ ಬೆರೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಾದ ಶಖಾಪುರ ಪಂಪ್​​ ಆಪರೇಟರ್​​ ಮೌನೇಶ್​​ ಹಾಗೂ ಅರಕೇರಾ.ಜೆ ಗ್ರಾಮದ ಶಾಂತಗೌಡನನ್ನು ಬಂಧಿಸಲಾಗಿದೆ. ಸುರಪುರದ ಡಿವೈಎಸ್​​ಪಿ ಶಿವನಗೌಡ ಪಾಟೀಲ ಅವರ ನೇತೃತ್ವದ ತಂಡ ಆರೋಪಿಗಳನ್ನು ಸೆರೆ ಹಿಡಿದಿದೆ. ಇದೆ 9 ರಂದು ಹಣಸಗಿ ತಾಲೂಕಿನ ಮುದನೂರ ಕೆ ಗ್ರಾಮದ ಬಾವಿಗೆ ಹಾಗೂ ನೀರು ಪೂರೈಸುವ ಪೈಪ್​​​ನಲ್ಲಿ ವಿಷ ಬೆರೆಸಿದ್ರು. ಗ್ರಾ.ಪಂ. ಪಿಡಿಒ ಸಿದ್ರಾಮಪ್ಪರನ್ನು ತೆಗೆಯುವ ಉದ್ದೇಶದಿಂದ ಬಾವಿಯಲ್ಲಿ ವಿಷ ಬೆರೆಸಿದ್ದಾರೆ. ಆ ಮೂಲಕ ಅವರ ಹೆಸರಿಗೆ ಕಪ್ಪು ಚುಕ್ಕೆ ತರಲು ಯತ್ನಿಸಿದ್ದಾರೆಂದು ತನಿಖೆಯಿಂದ ತಿಳಿದು ಬಂದಿದೆ.
ಶಾಂತಗೌಡಗೆ ಗ್ರಾ.ಪಂ.ನಲ್ಲಿ ಉದ್ಯೋಗ ಖಾತ್ರಿ ಸೇರಿದಂತೆ ಇತರ ಕೆಲಸಗಳು ತನಗೆ ಕೊಡದಿದ್ದಕ್ಕೆ ಪಿಡಿಒ ಮೇಲೆ ಸಿಟ್ಟಾಗಿ ವಿಷ ಹಾಕಿದ್ದಾರೆ ಎನ್ನಲಾಗಿದೆ. ಈ ರೀತಿ ಮಾಡಿದ್ರೆ ಪಿಡಿಒ ಅವರನ್ನು ವರ್ಗಾವಣೆ ಮಾಡುತ್ತಾರೆ ಎನ್ನುವ ಪ್ಲ್ಯಾನ್ ಆರೋಪಿಗಳದಾಗಿತ್ತು ಎಂದು ಹೇಳಲಾಗಿದೆ. ಇನ್ನು ಬಾವಿಗೆ ವಿಷ ಬೆರೆಸಿದ್ದ ಮೌನೇಶ್​​​​ ತನ್ನ ಮೇಲೆ ಯಾರಿಗೂ ಸಂಶಯ ಬರಬಾರದೆಂದು ತಾನೇ ಊರಿನವರಿಗೆ ನೀರು ಕುಡಿಯಬಾರದೆಂದು ಹೇಳಿ ಡ್ರಾಮಾ ಮಾಡಿದ್ದ ಎಂಬ ಮಾಹಿತಿ ತನಿಖೆ ಬಳಿಕ ಬಹಿರಂಗವಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv