ರಾಮನಗರ ಬಿಜೆಪಿ ಮೇಲೆ ಹಿಡಿತ ಸಾಧಿಸಲು ನಾಯಕರ ಮಧ್ಯೆ ಡಿಶುಂ ಡಿಶುಂ..!

ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಕಾಳಗ ಬೀದಿಗೆ ಬಿದ್ದಿದೆ. ರಾಮನಗರ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಮತ್ತು ಜಿಲ್ಲಾ ಪ್ರಭಾರಿ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವತ್ಥ್​ನಾರಾಯಣರ ಮಧ್ಯೆ ರಾಮನಗರದ ಮೇಲೆ ಹಿಡಿತ ಸಾಧಿಸಲು ಫೈಟ್​ ಶುರುವಾಗಿದೆ. ಅಷ್ಟಕ್ಕೂ ಈ ರೀತಿ ಸ್ವಪಕ್ಷದ ನಾಯಕರುಗಳೇ ಕಾಳಗ ಆರಂಭಿಸೋಕೆ ಕಾರಣಗಳೇನಿರಬಹುದು? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಅಶ್ವತ್ಥ್​ನಾರಾಯಣ ಮತ್ತು ರುದ್ರೇಶ್​ ನಡುವೆ ಫೈಟ್ ಏಕೆ…?
2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಸಂಬಂಧಿಯೂ ಆಗಿರುವ ಎಂ.ರುದ್ರೇಶ್ ಟಿಕೆಟ್​ ಗಿಟ್ಟಿಸಿಕೊಂಡು ಕಣಕ್ಕಿಳಿದಿದ್ರು. ಜೆಡಿಎಸ್​ನ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿಯ ರುದ್ರೇಶ್​​ ಪರಾಭವಗೊಂಡಿದ್ದು, ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಗೆದ್ದು, ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈಗ ಇತಿಹಾಸ. ಇತ್ತ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ಕ್ಷೇತ್ರಕ್ಕೆ ಉಪ-ಚುನಾವಣೆ ಎದುರಾಗಿದ್ದು, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ಇಷ್ಟೆಲ್ಲ ಪ್ರಕ್ರಿಯೆಗಳು ನಡೆಯುವ ಮಧ್ಯೆಯೇ 2018ರ ರಾಜ್ಯ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಬಿಜೆಪಿ, ರಾಮನಗರ ಜಿಲ್ಲೆಗೆ ಪ್ರಭಾರಿ ಉಸ್ತುವಾರಿಯಾಗಿ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವತ್ಥ್​ನಾರಾಯಣ ಅವರನ್ನು ನೇಮಕ ಮಾಡಿತ್ತು. ಒಂದು ಕಡೆ ರಾಮನಗರ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಇದ್ರೆ, ಇನ್ನೊಂದೆಡೆ ಅಶ್ವತ್ಥ್​ನಾರಾಯಣ ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ.

ಅದ್ರೆ ಇದೆಲ್ಲದರ ಮಧ್ಯೆ ಅಶ್ವತ್ಥ್​ನಾರಾಯಣ ಮತ್ತು ರುದ್ರೇಶ್​ ನಡುವೆ ನಡೆದಿದ್ದೇನು? ಎಂಬುದೇ ಬಹಳ ರೋಚಕ ವಿಚಾರ. 2018ರ ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕ ಅಶ್ವತ್ಥ್​ನಾರಾಯಣ ರಾಮನಗರ ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ರು. ಇದಕ್ಕೆ ಟಾಂಗ್​ ಕೊಡುವ ನಿಟ್ಟಿನಲ್ಲಿ ರಾಮನಗರ ಜಿಲ್ಲಾಧ್ಯಕ್ಷ ಎಂ.ರುದ್ರೇಶ್​, ಅಶ್ವತ್ಥ್​ನಾರಾಯಣ ಏನೇ ಮಾಡಲು ಮುಂದಾದ್ರೂ ಜಿಲ್ಲೆಯಲ್ಲಿ ಅಡ್ಡಿವುಂಟು ಮಾಡಲು ಶುರು ಮಾಡಿದ್ರು. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ರಫೇಲ್​ ಯುದ್ಧ ವಿಮಾನ ಖರೀದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ನ್ಯಾಯಾಲಯದಲ್ಲಿ ನಿಲ್ಲಲಿಲ್ಲ. ಇದಾದ ಬಳಿಕ ರಾಜ್ಯದಲ್ಲಿ ಬಿಜೆಪಿ ನಾಯಕರುಗಳು ಎಐಸಿಸಿ ಅಧ್ಯಕ್ಷ ರಾಹುಲ್​ಗಾಂಧಿ ವಿರುದ್ಧ ಪ್ರತಿಭಟನೆ ಮುಂದಾಗಿದ್ರು. ಈ ಸಂದರ್ಭದಲ್ಲಿ ರಾಮನಗರದಲ್ಲಿ ಪ್ರತಿಭಟನೆಯ ನೇತೃತ್ವವನ್ನು ಅಶ್ವತ್ಥ್​ನಾರಾಯಣ ವಹಿಸಿಕೊಂಡಿದ್ರು. ರಾಮನಗರ ಜಿಲ್ಲಾಧ್ಯಕ್ಷ ಎಂ.ರುದ್ರೇಶ್​ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಶ್ವತ್ಥ್​ನಾರಾಯಣ ಪ್ರತಿಭಟನೆಗೆ ಮುಂದಾಗಿದ್ದರು. ಹೀಗಾಗಿ, ಖುದ್ದು ಬಿಜೆಪಿ ಕಾರ್ಯಕರ್ತರಿಗೆ ರುದ್ರೇಶ್​ ಪ್ರತಿಭಟನೆಗೆ ಹೋಗದಂತೆ ತಡೆದಿದ್ರು. ಅದ್ರೆ ರುದ್ರೇಶ್​ ಮಾತು ಕೇಳದ ಕಾರ್ಯಕರ್ತರು ಅಶ್ವತ್ಥ್​ನಾರಾಯಣ ನೇತೃತ್ವದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು ಎನ್ನಲಾಗಿದೆ.

ಇದರಿಂದ ಸಹಜವಾಗಿಯೇ ಕೆರಳಿದ ಎಂ.ರುದ್ರೇಶ್​​, ನೇರವಾಗಿ ಅಶ್ವತ್ಥ್​ನಾರಾಯಣ ವಿರುದ್ಧ ಕಿಡಿಕಾರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಬಳಿ ರಾಮನಗರ ಪ್ರಭಾರಿ ಉಸ್ತುವಾರಿಯನ್ನು ಬದಲಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇನ್ನು ನಿನ್ನೆ ಅಟಲ್​ ಬಿಹಾರಿ ವಾಜಪೇಯಿ ಹುಟ್ಟುಹಬ್ಬದ ಅಂಗವಾಗಿ ಎಲ್​ಇಡಿ ಸ್ಕ್ರೀನ್​ ಆಳವಡಿಸಿ ಕಾರ್ಯಕ್ರಮ ನಡೆಸಿದ್ದು, ಆ ಕಾರ್ಯಕ್ರಮಕ್ಕೆ ಪ್ರಭಾರಿ ಉಸ್ತುವಾರಿಯನ್ನು ಆಹ್ವಾನಿಸಿಲ್ಲ. ಇದರಿಂದ ರಾಮನಗರದಲ್ಲಿ ಬಿಜೆಪಿ ನಾಯಕರ ಕಾಳಗ ಬೀದಿಗೆ ಬಿದ್ದಂತಾಗಿದೆ.
ಒಟ್ನಲ್ಲಿ ರಾಮನಗರ ಜಿಲ್ಲೆ ಬಿಜೆಪಿ ಮೇಲೆ ಹಿಡಿತ ಸಾಧಿಸಲು ಅಶ್ವತ್ಥ್​ನಾರಾಯಣ ಮತ್ತು ಎಂ.ರುದ್ರೇಶ್​ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ಮುಂದೇನಾಗುತ್ತೆ ಎಂಬುದು ಸದ್ಯ ಕುತೂಹಲ ಕೆರಳಿಸಿದೆ.

ವಿಶೇಷ ವರದಿ :- ಪಿ.ಮಧುಸೂಧನ್