ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸ್ತಿರೋ ಎಸ್ಐಟಿ ಆರೋಪಿಯ ಬಗ್ಗೆ ಮಹತ್ವದ ಮಾಹಿತಿಗಳನ್ನ ಕಲೆ ಹಾಕಿದೆ. ಸಿಂಧಗಿಯ ಮೂಲದ ಆರೋಪಿ ಪರಶುರಾಮ ವಾಗ್ಮೋರೆ ‘ಟೈಗರ್‌’ ಸಂಘಟನೆ ಸದಸ್ಯನೆಂದು ತಿಳಿದು ಬಂದಿದೆ.

ಏನಿದು ‘ಟೈಗರ್‌’ ಸಂಘಟನೆ..?
ಉತ್ತರ ಕರ್ನಾಟಕ ಭಾಗದಲ್ಲಿ ನಾಗರಾಜ ಜಂಬಗಿ ಮುಂದಾಳತ್ವದಲ್ಲಿ ಟೈಗರ್‌ ಸಂಘಟನೆ ಹುಟ್ಟಿಕೊಂಡಿತ್ತು. ಹಿಂದುತ್ವ ಸಿದ್ಧಾಂತವನ್ನು ಪ್ರಶ್ನಿಸಿದವರ ಮೇಲೆ ದಾಳಿ ಮಾಡಲೆಂದೇ ಈ ಹುಟ್ಟುಕೊಂಡಿತ್ತು. ಹಿಂದೂಪರ ಸಂಘಟನೆಗಳಲ್ಲಿದ್ದ ಯುವಕರು ಈ ಸಂಘಟನೆ ಸೇರಿಕೊಂಡಿದ್ದರು. ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿದಂತೆ ಹಲವು ಕಡೆಗಳಲ್ಲಿ ಹಿಂದುತ್ವ ವಿರೋಧಿಗಳ ಮೇಲೆ ಟೈಗರ್ ಗ್ಯಾಂಗ್ ದಾಳಿ ಮಾಡಿತ್ತು.

ಉತ್ತರ ಕರ್ನಾಟಕ ಭಾಗದಲ್ಲಿ ಕರ್ತವ್ಯದಲ್ಲಿದ್ದ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ರಾಘವೇಂದ್ರ ಔರಾದಕರ್ ಟೈಗರ್ ಗ್ಯಾಂಗ್ ಅನ್ನು ಪತ್ತೆ ಹಚ್ಚಿದ್ದರು. ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಆಗ ಟೈಗರ್ ಸಂಘಟನೆ ಮುಖ್ಯಸ್ಥ ನಾಗರಾಜ ಜಂಬಗಿಯನ್ನು ಪೊಲೀಸರು ಬಂಧಿಸಿದ್ದರು. ನಾಗರಾಜ ಜೈಲಿನಲ್ಲೇ ಸಹ ಕೈದಿಗಳಿಂದ ಹಲ್ಲೆಗೀಡಾಗಿ ಮೃತಪಟ್ಟಿದ್ದ.

ಈಗ ಗೌರಿ ಲಂಕೇಶ್​ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್​ನಿಂದ ಪಡೆದ ಮಾಹಿತಿ ಮೇರೆಗೆ ಪ‍ರಶುರಾಮ್‌ನನ್ನು ಎಸ್​ಐಟಿ ಅಧಿಕಾರಿಗಳು ಪರಶುರಾಮ ವಾಗ್ಮೋರೆಯನ್ನು ಬಂಧಿಸಿದ್ದಾರೆ. ಪರುಶುರಾಮ್ ಮನೆ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಜತೆ ಪರಶುರಾಮ್ ಒಡನಾಟವಿಟ್ಟುಕೊಂಡಿದ್ದ. ‘ಟೈಗರ್‌’ ಸಂಘಟನೆಯನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಆಗಾಗ ಚರ್ಚೆ ಮಾಡುತ್ತಿದ್ದ. ಗೌರಿ ಹತ್ಯೆಗೆ ಆತ ಸಹಕರಿಸಿದ್ದ ಎಂಬುದಕ್ಕೆ ಕೆಲವು ಸಾಕ್ಷಿ ಕೂಡ ಸಿಕ್ಕಿವೆ ಎಂದು ಫಸ್ಟ್ ನ್ಯೂಸ್​ಗೆ ಎಸ್​ಐಟಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ನಿಮ್ಮ ಸಲಹೆ,ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv