ಪರಿಷತ್‌ನಲ್ಲಿ ಇಂದಿರಾ ಕ್ಯಾಂಟಿನ್‌ ಫೈಟ್‌..!

ಇಂದಿರಾ ಕ್ಯಾಂಟೀನ್​​​ ಯೋಜನೆಯಲ್ಲಿ ಕಿಕ್​​ ಬ್ಯಾಕ್​ ಆರೋಪ ಕುರಿತಂತೆ ಇಂದು ವಿಧಾನಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಇಂದಿರಾ ಕ್ಯಾಂಟೀನ್ ಅವ್ಯವಹಾರ ಕುರಿತ ಚರ್ಚೆಗೆ ಡೆಪ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿ ನಿರಾಕರಿಸಿದ್ರೂ ಚರ್ಚೆ ನಡೆಯಬೇಕೆಂದು ಶಾಸಕ ರಾಮದಾಸ್ ಪಟ್ಟು ಹಿಡಿದರು.

ನನ್ನ ಚರ್ಚೆ ಅಪೂರ್ಣವಾಗಿದೆ. ಚರ್ಚೆ ಮುಂದುವರೆಸಲು ಅವಕಾಶ ಕೊಡಿ. ನನ್ನ ಬಳಿ ಭ್ರಷ್ಟಾಚಾರ ಕುರಿತು ಎಲ್ಲ ದಾಖಲೆ ಇದೆ. ದಾಖಲೆ ಇಟ್ಟು ಚರ್ಚೆ ಮುಂದುವರೆಸುತ್ತೇನೆ. ನನ್ನ ವಾಕ್ ಸ್ವಾತಂತ್ರ್ಯ ಮೊಟಕುಗೊಳಿಸಬೇಡಿ. ಕಿಕ್ ಬ್ಯಾಕ್ ಯಾರು ಪಡೆದರು ಅನ್ನುವ ಬಗ್ಗೆಯೂ ದಾಖಲೆ ಇದೆ ಎಂದು ಈ ಬಗ್ಗೆ ಚರ್ಚೆ ನಡೆಸಲು ರಾಮದಾಸ್ ಪಟ್ಟು ಹಿಡಿದರು. ಈ ವೇಳೆ ಬಿಜೆಪಿ ಸದಸ್ಯರು ರಾಮದಾಸ್ ಬೆಂಬಲಕ್ಕೆ ನಿಂತರು.

ಆದ್ರೆ ನಿಮ್ಮ ಚರ್ಚೆ ಬೇಡ ಎಂದು ಡೆಪ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿ ಪದೇ ಪದೇ ಸೂಚನೆ ನೀಡಿದ್ರೂ ಅವರ ಸೂಚನೆಗಳನ್ನು ರಾಮದಾಸ್ ತಳ್ಳಿ ಹಾಕಿದರು. ಸದನದ ಸಮಯವನ್ನು ವ್ಯರ್ಥ ಮಾಡಬೇಡಿ. ಸುಗಮ ಕಲಾಪಕ್ಕೆ ಅಡ್ಡಿಪಡಿಸಬೇಡಿ. ದಾಖಲೆ ಕೊಟ್ಟರೆ ಮರು ಪರಿಶೀಲಿಸುವುದಾಗಿ ಸ್ಪೀಕರ್ ರೂಲಿಂಗ್​​​ ಕೊಟ್ಟಿದ್ದಾರೆ. ಹಾಗಾಗಿ ಕಲಾಪ ಸಲಹಾ ಸಮಿತಿಗೆ ದಾಖಲೆ ಸಲ್ಲಿಸಿ ಎಂದು ಕೃಷ್ಣಾರೆಡ್ಡಿ ಹೇಳಿದರೂ ಅವರ ಮನವಿಗೆ ರಾಮದಾಸ್ ಬಗ್ಗದೆ ಚರ್ಚೆಗೆ ಹಟ ಹಿಡಿದರು.