ರಾಮಾಯಣದ ತೀರ್ಥಯಾತ್ರೆಗೆ ಸಜ್ಜಾಗಿದೆ ‘ಶ್ರೀ ರಾಮಾಯಣ ಎಕ್ಸ್​ಪ್ರೆಸ್​’ ವಿಶೇಷ ರೈಲು..!

ನವದೆಹಲಿ: ಪುರಾತನ ಸಂಸ್ಕೃತಿಯನ್ನು ಜನರು ಮರೆಯುತ್ತಿರುವ ಇಂದಿನ ದಿನಮಾನದಲ್ಲಿ ಜನರನ್ನು ಪುರಾತನ ಸಂಸ್ಕೃತಿಗೆ ಹತ್ತಿರವಾಗಿಸಲು ಸರ್ಕಾರ ರೈಲೊಂದನ್ನ ಬಿಟ್ಟಿದೆ. ‘ಶ್ರೀ ರಾಮಾಯಣ ಎಕ್ಸ್​ಪ್ರೆಸ್​’ ಹೆಸರಿನ ವಿಶೇಷ ರೈಲು ಇದಾಗಿದ್ದು, ನವೆಂಬರ್​ 14ರಂದು ಈ ರೈಲು ದೆಹಲಿಯಿಂದ ಹೊರಟು ರಾಮಾಯಣದ ಸ್ಥಳಗಳಾದ ಉತ್ತರ ಪ್ರದೇಶದ ಆಯೋಧ್ಯೆ, ತಮಿಳುನಾಡಿನ ರಾಮೇಶ್ವರಂ ಹಾಗೂ ಶ್ರೀಲಂಕಾದ ಕೊಲಂಬೊವರೆಗೂ ಸಂಚರಿಸಿ ಪ್ರಯಾಣಿಕರಿಗೆ ಪುರಾತನ ಸಂಸ್ಕೃತಿಯ ಮಹತ್ವವನ್ನು ಮನಗಾಣಿಸಲಿದೆ.
ಇನ್ನು ರಾಮಾಯಣ ವಿಶೇಷ ರೈಲು 15,120 ರೂಪಾಯಿಗಳಲ್ಲಿ ರಾಮಾಯಣದ ಪ್ರಮುಖ ಸ್ಥಳಗಳನ್ನು ಸುತ್ತಿಸಲಿದೆ. ವರ್ಷಕ್ಕೆ ಒಮ್ಮೆ ಈ ರೈಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಒಮ್ಮೆಗೇ 800 ಮಂದಿ ಪ್ರಯಾಣಿಸಬಹುದಾಗಿದೆ ಎಂದು ಐಆರ್​ಸಿಟಿಸಿ ಮೂಲಗಳಿಂದ ತಿಳಿದುಬಂದಿದೆ.
‘ಶ್ರೀ ರಾಮಾಯಣ ಎಕ್ಸ್​ಪ್ರೆಸ್​’ ಕುರಿತಾದ ಹೆಚ್ಚಿನ ಮಾಹಿತಿ ಹೀಗಿದೆ:
⦁ ಈ ವಿಶೇಷ ರೈಲು ನವೆಂಬರ್​​ 14ರಂದು ದೆಹಲಿಯಿಂದ ಹೊರಡಲಿದ್ದು, 16 ದಿನಗಳ ಕಾಲ ಸಂಚರಿಸಲಿದೆ.
⦁ ಈ ವಿಶೇಷ ರೈಲಿನಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಅಲ್ಲದೇ ಧಾರ್ಮಿಕ ಸ್ಥಳಗಳಲ್ಲಿ ಪ್ರಯಾಣಿಕರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
⦁ ಯಾತ್ರಾಸ್ಥಳಗಳನ್ನ ತಲುಪಲು ಆಯಾ ರೈಲು ನಿಲ್ದಾಣದಿಂದ ಬಸ್ ವ್ಯವಸ್ಥೆ ಇರುತ್ತದೆ.
⦁ ಈ ರೈಲಿನಲ್ಲಿ ಐಆರ್​ಸಿಟಿಸಿ ಮ್ಯಾನೇಜರ್​ಗಳೇ ಟೂರ್​ ಗೈಡ್​ಗಳಾಗಿರುತ್ತಾರೆ ಎನ್ನುವುದು ವಿಶೇಷ.
⦁ ವಿಶೇಷ ರೈಲಿನ ಪ್ರಯಾಣ ದರ ಭಾರತದಲ್ಲಿ ರಾಮೇಶ್ವರಂ ವರೆಗೂ ಸಂಚರಿಸಲು 15,120 ರೂಪಾಯಿ ಆಗಿದ್ದು, ಅಲ್ಲಿಂದ ಮುಂದಕ್ಕೆ ಸೀಮೊಲ್ಲಂಘನೆ ಮಾಡಿ ರಾಮಾಯಣದ ಹೆಗ್ಗುರುತಾದ ಕೊಲಂಬೋಕ್ಕೆ ತಲುಪಲು ವಾಪಸ್​ ಚೆನ್ನೈಗೆ ಬಂದು ಅಲ್ಲಿಂದ ವಿಮಾನದಲ್ಲಿ ಹಾರಬಹುದಾಗಿದೆ. ವಿಮಾನ ವ್ಯವಸ್ಥೆಯನ್ನು ಐಆರ್​ಸಿಟಿಸಿ ಸಂಸ್ಥೆಯೇ ಕಲ್ಪಿಸಲಿದೆ. ವಿಮಾನ ಪ್ರಯಾಣ ಸೇರಿದಂತೆ ಒಟ್ಟು ಪ್ರವಾಸಕ್ಕೆ ಇನ್ನೊಂದೆರಡು ಸಾವಿರ ಹೆಚ್ಚಿಗೆ ತಗುಲಬಹುದು.
⦁ ಭಾರತದಲ್ಲಿ ‘ಶ್ರೀ ರಾಮಾಯಣ ಎಕ್ಸ್​ಪ್ರೆಸ್​’ ಸಂಚರಿಸುವ ರಾಮಾಯಣದ ಯಾತ್ರಸ್ಥಳಗಳು ಇಂತಿವೆ: ಅಯೋಧ್ಯೆ, ನಂದಿಗ್ರಾಮ, ಸಿತಮಾರಿ, ಜನಕಪುರ, ವಾರಾಣಸಿ, ಪ್ರಯಾಗ​​​, ಶೃಂಗವರ ಪುರ್, ಚಿತ್ರಕೂಟ, ನಾಸಿಕ್​​, ಹಂಪಿ ಮತ್ತು ರಾಮೇಶ್ವರಂ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv