ನಿಮಗೊತ್ತಾ? ಶೂ ಹಾಕದೆ ಬರಿಗಾಲಲ್ಲೇ ಆಡಿ ವಿಶ್ವಕಪ್‌ಗೆ ಕ್ವಾಲಿಫೈ ಆಗಿತ್ತು ಭಾರತ!

ಇದೇ ಜೂನ್ 14ರಿಂದ ಆರಂಭವಾಗ್ತಿರೋ ಫಿಫಾ ವಿಶ್ವಕಪ್‌ಗಾಗಿ ಇಡೀ ಜಗತ್ತು ಕಾತರದಿಂದ ಕಾದಿದೆ. ಭಾರತ ಫಿಫಾದಲ್ಲಿ ಭಾಗಿಯಾಗ್ತಿಲ್ಲವಾದ್ರೂ ಇಲ್ಲೂ ಅಭಿಮಾನಿಗಳಂತೂ ಮ್ಯಾಚ್‌ ನೋಡಲು ಕಾದಿರೋದು ಸತ್ಯ. ಅವರೆಲ್ಲರಿಗೂ ಇರೋ ಬೇಜಾರು ಒಂದೇ. ನಮ್ಮ ಇಂಡಿಯನ್ ಟೀಮ್ ವಿಶ್ವಕಪ್‌ ಫುಟ್‌ಬಾಲ್‌ಗೆ ಕ್ವಾಲಿಫೈ ಆಗ್ತಾ ಇಲ್ವಲ್ಲಾ ಅನ್ನೋದು. ಆದ್ರೆ ಬಹಳ ಮಂದಿಗೆ ಗೊತ್ತಿದೆಯೋ ಏನೋ? 1950ರಲ್ಲಿ ಒಮ್ಮೆ ಇಂಡಿಯನ್ ಫುಟ್‌ಬಾಲ್ ಟೀಮ್‌ ವಿಶ್ವಕಪ್‌ಗೆ ಕ್ವಾಲಿಫೈ ಆಗಿತ್ತು. ಬ್ರೆಜಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾಗಿಯಾಗೋ ಎಲ್ಲಾ ಅವಕಾಶಗಳೂ ಸಿಕ್ಕಿದ್ವು. ಆದ್ರೂ ಭಾರತೀಯ ತಂಡ ಬ್ರೆಜಿಲ್‌ಗೆ ತೆರಳಲಿಲ್ಲ. ವಿಶ್ವಕಪ್‌ ಆಡಲೂ ಇಲ್ಲ. ಅದೇ ಲಾಸ್ಟ್‌. ಆ ನಂತರ ಯಾವತ್ತೂ ಭಾರತೀಯ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯಲೇ ಇಲ್ಲ. ಅಷ್ಟಕ್ಕೂ 1950ರಲ್ಲಿ ಕ್ವಾಲಿಫೈ ಆದ್ರೂ ವಿಶ್ವಕಪ್ ಆಡಲು ಭಾರತ ನಿರಾಕರಿಸಿದ್ದೇಕೆ ಅನ್ನೋದೇ ಒಂದು ಇಂಟರೆಸ್ಟಿಂಗ್‌ ಸ್ಟೋರಿ.

ಬರಿಗಾಲಲ್ಲಿ ಆಡುತ್ತಿದ್ದ ಭಾರತೀಯ ಆಟಗಾರರು
ಆವಾಗಷ್ಟೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಸ್ವಾತಂತ್ರ್ಯಾನಂತರ ಭಾರತೀಯ ತಂಡ ಪಾಲ್ಗೊಳ್ಳುತ್ತಿದ್ದ ಮೊದಲ ಫುಟ್‌ಬಾಲ್ ವಿಶ್ವಕಪ್ ಅದಾಗಿತ್ತು.

ನಿಮಗೆ ಒಂದು ಸತ್ಯ ಗೊತ್ತಿದೆಯೋ ಏನೋ. ಭಾರತೀಯ ತಂಡ ಆವಾಗ ಶೂ ಹಾಕದೇ ಬರಿಗಾಲಿನಲ್ಲಿ ಆಡ್ತಾ ಇತ್ತು. ಆಟಗಾರರು ಕಾಲಿಗೆ ಶೂ ಬದಲಾಗಿ ಌಂಕಲ್ ಬ್ಯಾಂಡ್‌ ಧರಿಸುತ್ತಿದ್ದರು. ಆವಾಗಿನ ಕಾಲಕ್ಕೆ ಭಾರತದಲ್ಲಿ ಶೂ ಹೋಗ್ಲಿ, ಕಾಲಿಗೆ ಚಪ್ಪಲಿ ಹಾಕೋರೇ ಕಮ್ಮಿ ಇದ್ರು. ಬರಿಗಾಲಿನಲ್ಲಿ ಓಡಾಡೋದನ್ನೇ ರೂಢಿಸಿಕೊಂಡಿದ್ದ ಭಾರತೀಯರು, ಬರಿಗಾಲಿನಲ್ಲಿ ಆಡೋದನ್ನೇ ಅಭ್ಯಾಸ ಮಾಡಿಕೊಂಡುಬಿಟ್ಟಿದ್ರು. ಹೀಗೆ ಬರಿಗಾಲಿನಲ್ಲೇ ಆಡಿ 1948ರಲ್ಲಿ ನಡೆದಿದ್ದ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಬಲಿಷ್ಠ ಫ್ರಾನ್ಸ್ ತಂಡವನ್ನೇ ಮಣ್ಣು ಮುಕ್ಕಿಸಿತ್ತು. ಇದರ ಬೆನ್ನಲ್ಲೇ ಅರ್ಹತಾ ಸುತ್ತಿನಲ್ಲಿ ಆಡಲಿಳಿದ ಭಾರತೀಯ ತಂಡ, 1950ರ ವಿಶ್ವಕಪ್‌ಗೆ ಸುಲಭವಾಗಿ ಅರ್ಹತೆಯನ್ನೂ ಪಡೆದುಬಿಡ್ತು. ಕೆಲ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡೋದಕ್ಕೂ ಬಾರದೇ ಇದ್ದದ್ದು ಇಂಡಿಯನ್ ಟೀಮ್‌ಗೆ ಲಾಭವಾಗಿತ್ತು. ಇನ್ನೇನು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಭಾರತೀಯ ತಂಡ ಬ್ರೆಜಿಲ್‌ಗೆ ಪ್ರಯಾಣ ಬೆಳೆಸೋದಷ್ಟೇ ಬಾಕಿ ಉಳಿದಿತ್ತು. ಆದ್ರೆ ಆಲ್‌ ಇಂಡಿಯಾ ಫುಟ್‌ಬಾಲ್‌ ಅಸೋಸಿಯೇಷನ್‌ ಇದ್ದಕ್ಕಿದ್ದಂತೆಯೇ ಬ್ರೆಜಿಲ್‌ ಪ್ರವಾಸವನ್ನ ರದ್ದುಗೊಳಿಸಿಬಿಡ್ತು. ಭಾರತೀಯ ತಂಡ ವಿಶ್ವಕಪ್ ಆರಂಭವಾಗೋದಕ್ಕೂ ಮೊದಲೇ ಟೂರ್ನಿಯಿಂದ ಹಿಂದೆ ಸರಿದುಬಿಡ್ತು. ತನ್ನ ನಿರ್ಧಾರಕ್ಕೆ ಫುಟ್‌ಬಾಲ್ ಅಸೋಸಿಯೇಷನ್‌ ಹಲವು ಕಾರಣಗಳನ್ನು ನೀಡಿತ್ತು ನಿಜ.

ವಿಶ್ವಕಪ್ ಆಡದಿರಲು ಕೊಟ್ಟ ಕಾರಣಗಳು!

  1. ಭಾರತೀಯ ತಂಡಕ್ಕೆ ಅಭ್ಯಾಸಕ್ಕೆ ಸಮಯಾವಕಾಶ ಕಡಿಮೆ ಇದೆ
  2. ಪ್ರಯಾಣ ವೆಚ್ಚ ಸಿಕ್ಕಾಪಟ್ಟೆ ಜಾಸ್ತಿಯಾಗುತ್ತೆ
  3. ನಮಗೆ ವಿಶ್ವಕಪ್‌ಗಿಂತಲೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲೋದೇ ಮುಖ್ಯ

ಆಲ್‌ ಇಂಡಿಯಾ ಫುಟ್‌ಬಾಲ್‌ ಅಸೋಸಿಯೇಷನ್ ಏನೋ ತನ್ನದೇ ಆದ ಕಾರಣಗಳನ್ನು ಕೊಟ್ಟಿತ್ತು ನಿಜ. ಆದ್ರೆ ಇದೆಲ್ಲಕ್ಕಿಂತಾ ಹೆಚ್ಚಾಗಿ ಬಹಳ ಚರ್ಚೆಯಾದ ಮತ್ತೂ ಒಂದು ಇಂಟರೆಸ್ಟಿಂಗ್ ಕಾರಣವಿತ್ತು. ಅದೇನು ಅಂದ್ರೆ ಬ್ರೆಜಿಲ್ ವಿಶ್ವಕಪ್‌ನಲ್ಲಿ ಬರಿಗಾಲಿನಲ್ಲಿ ಆಡೋದನ್ನ ನಿಷೇಧಿಸಲಾಗಿತ್ತು.

‘ಶೂ’ ಹಾಕಿ ಆಡದ ಭಾರತೀಯ ತಂಡ!
ಭಾರತೀಯ ತಂಡದ ಆಟಗಾರರು ಬರಿಗಾಲಿನ ಆಟಕ್ಕೆ ಒಗ್ಗಿಹೋಗಿದ್ದರು. ಬರಿಗಾಲಿನಲ್ಲಿ ಓಡೋದಾಗಲಿ, ಆಡೋದಾಗಲಿ, ಜಿಗಿಯೋದಾಗಲಿ, ಒದೆಯೋದಾಗಲಿ ಎಲ್ಲವೂ ಕರಗತವಾಗಿ ಹೋಗಿತ್ತು. ಆದ್ರೆ 1950ರ ವಿಶ್ವಕಪ್‌ನಲ್ಲಿ ಯಾವುದೇ ತಂಡ ಬರಿಗಾಲಿನಲ್ಲಿ ಆಡುವಂತಿಲ್ಲ ಅಂತಾ ರೂಲ್ಸ್ ಮಾಡಿದಾಗ ಭಾರತೀಯ ತಂಡ ಕಂಗಾಲಾಗುವಂತಾಯಿತು. ಶೂ ಹಾಕಿಕೊಂಡು ಹೊಸದಾಗಿ ಅಭ್ಯಾಸ ಮಾಡೋ ಅನಿವಾರ್ಯತೆ ಎದುರಾಯಿತು. ಆದ್ರೆ ಹೊಸದಾಗಿ ಶೂ ಹಾಕಿಕೊಂಡು ಅಭ್ಯಾಸ ಮಾಡಿ, ವಿಶ್ವ ಗೆಲ್ಲಲು ತಯಾರಾಗೋದು ಸುಲಭ ಸಾಧ್ಯವಿರಲಿಲ್ಲ. ಅಷ್ಟೊಂದು ಸಮಯಾವಕಾಶವೂ ಇರಲಿಲ್ಲ. ಹೀಗಾಗಿ ಬರಿಗಾಲಿನಲ್ಲಿ ಆಡೋದು ಬ್ಯಾನ್ ಆಗಿದೆ ಅಂದ್ರೆ, ತಾವು ಆಡೋದಕ್ಕೆ ಹೋಗದಿರೋದೇ ಲೇಸು ಅನ್ನೋ ತೀರ್ಮಾನಕ್ಕೆ ಬರಲಾಯಿತು.
ಆವಾಗ ಕ್ಯಾಪ್ಟನ್‌ ಆಗಿದ್ದವರು ಶೈಲೇಂದ್ರನಾಥ ಮನ್ನಾ. 1950ರಿಂದ 60ರ ನಡುವಿನ ಕಾಲವನ್ನ ಇಂಡಿಯನ್ ಫುಟ್‌ಬಾಲ್‌ನ ‘ಸ್ವರ್ಣಯುಗ’ ಅಂತಾನೇ ಕರೆಯಲಾಗುತ್ತೆ. ದಕ್ಷಿಣ ಏಷ್ಯಾದ ಬಲಿಷ್ಠ ತಂಡವೆಂದು ಶೈಲೇಂದ್ರ ಮನ್ನಾರ ಟೀಮ್‌ ಗುರುತಿಸಿಕೊಂಡಿತ್ತು. ಬರಿಗಾಲಿನ ಆಟ ಬ್ಯಾನ್ ಆಗಿದ್ದರಿಂದ ಭಾರತೀಯ ತಂಡ ವಿಶ್ವಕಪ್ ಆಡೋದಕ್ಕೆ ಹೋಗಲಿಲ್ಲ ಅನ್ನೋ ಮಾತನ್ನ ಶೈಲೇಂದ್ರನಾಥ ಮನ್ನಾ ನಿರಾಕರಿಸ್ತಾರೆ. ಆದ್ರೆ ಅದುವೇ ಪ್ರಮುಖ ಕಾರಣ ಅನ್ನೋ ಚರ್ಚೆಯಂತೂ ಆ ಅವಧಿಯಲ್ಲಿ ಬಲು ದೊಡ್ಡ ಚರ್ಚೆ ಹುಟ್ಟು ಹಾಕಿತ್ತು. ವಿಪರ್ಯಾಸ ಅಂದ್ರೆ ಆವತ್ತು ಸಿಕ್ಕ ಅವಕಾಶವನ್ನ ನಿರಾಕರಿಸಿದ ಭಾರತೀಯ ಫುಟ್‌ಬಾಲ್ ತಂಡ, ಇವತ್ತಿನ ವರೆಗೂ ವಿಶ್ವಕಪ್‌ಗೆ ಅರ್ಹತೆ ಪಡೆಯಲೇ ಇಲ್ಲ. ಇವತ್ತಿಗೂ ಪಡೆದಿಲ್ಲ. ಬೇರೆ ತಂಡಗಳು ವಿಶ್ವಕಪ್‌ ಆಡೋದನ್ನ, ಅವರ ಸಂಭ್ರಮವನ್ನ ನೋಡೋದಕ್ಕಷ್ಟೇ ಭಾರತೀಯ ಫುಟ್‌ಬಾಲ್‌ ಪ್ರಿಯರ ಸಂತೋಷ ಸೀಮಿತವಾಗಿ ಹೋಗಿದೆ.
ವಿಶೇಷ ಬರಹ: ಜೆಫ್ರಿ ಅಯ್ಯಪ್ಪ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv