ಬಿಜೆಪಿ ಗೆದ್ದರೇ ಭಾರತ ಹಿಂದೂ ಪಾಕಿಸ್ತಾನವಾಗುತ್ತೆ; ಶಶಿ ತರೂರ್

ನವದೆಹಲಿ: 2019ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಭಾರತ ಒಂದು ಹಿಂದೂ ಪಾಕಿಸ್ತಾನ ಆಗುವುದರಲ್ಲಿ ಅನುಮಾನವಿಲ್ಲ ಅಂತ ಕಾಂಗ್ರೆಸ್ ನಾಯಕ ಶಶಿ ತರೂರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದಲ್ಲಿ ದೇಶದ ಸಂವಿಧಾನವನ್ನು ಛಿದ್ರ ಛಿದ್ರಗೊಳಸಿಸುತ್ತದೆ. ಹಿಂದು ರಾಷ್ಟ್ರದ ತತ್ವಗಳನ್ನಿಟ್ಟುಕೊಂಡು ಮತ್ತೊಂದು ಸಂವಿಧಾನವನ್ನ ಜಾರಿ ತರುತ್ತಾರೆ ಅಂತ ಆರೋಪಿಸಿದ್ದಾರೆ. ಈಗಾಗಲೇ ಅವರು 20 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಹೀಗಾಗಿ ರಾಜ್ಯಸಭೆಯಲ್ಲೂ ಅವರು ಬಹುಮತ ಪಡೆಯುತ್ತಾರೆ. ಒಂದು ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಲ್ಲಿ ಅವರು ಭಾರತದ ಸಂವಿಧಾನ ಬದಲಿಸುತ್ತಾರೆ ಅಂತ ಭವಿಷ್ಯ ನುಡಿದಿದ್ದಾರೆ. ತಿರುವನಂತಪುರಂನಲ್ಲಿ ಈ ಬಗ್ಗೆ ಮಾತನಾಡಿದ ಶಶಿ ತರೂರು, ಈ ಹಿಂದೆ ವಿ. ಡಿ.ಸಾವರ್ಕರ್, ಪಂಡಿತ್ ದೀನ್​ ದಯಾಳ ಉಪಾದ್ಯಾಯ್ ಹಾಗೂ ಎಂ.ಎಸ್. ಗೋಲ್ವಾಲಕರ್​ ಸಂವಿಧಾನವನ್ನ ಬದಲಿಸಲು ಸಜ್ಜಾಗಿದ್ದರು. ಪಾಶ್ಚಾತ್ಯ ಭಾಷೆಗಳಿಂದ ಹಾಗೂ ಯೋಚನೆಗಳಿಂದ ನಮ್ಮ ಸಂವಿಧಾನ ಕೂಡಿದೆ ಅಂತ ಆರೋಪ ಮಾಡಿದ್ದರು ಅಂತ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಸಂವಿಧಾನವನ್ನ ಪವಿತ್ರ ಗ್ರಂಥ ಅಂತ ಹೇಳಿಕೊಳ್ತಾರೆ. ಆದ್ರೆ ಸಂಸತ್​ನಲ್ಲಿ ಗಾಂಧಿಜಿ ಫೋಟೋ ಎದುರು ಸಾವರ್ಕರ್ ಫೋಟೋ ಹಾಕಿದ್ದಾರೆ. ಇವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಅಂತ ತರೂರು ಪ್ರಶ್ನಿಸಿದ್ದಾರೆ.