ಅಡಿಲೇಡ್​ ಟೆಸ್ಟ್​ಗೆ ಕೊಹ್ಲಿ ಸೈನ್ಯದಲ್ಲಿ ಯಾಱರು…?

ನಾಳೆಯಿಂದ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ನಡುವಿನ ಹೈ ವೋಲ್ಟೇಜ್, ಅಸಲಿ ಕ್ರಿಕೆಟ್ ವಾರ್ ಆರಂಭವಾಗಲಿದೆ. ಸರಣಿಯ ಪ್ರಥಮ ಕಾದಾಟಕ್ಕೆ ಸಾಕ್ಷಿಯಾಗಲು ಅಡಿಲೇಡ್​ನ ಓವಲ್ ಅಂಗಳ ರೆಡಿಯಾಗಿದೆ. ಎರಡೂ ತಂಡಗಳು ಶುಭಾರಂಭ ಮಾಡುವ ಕನಸು ಕಾಣುತ್ತಿವೆ.

ಅಡಿಲೇಡ್​ನಲ್ಲಿ ಟೀಮ್ ಇಂಡಿಯಾ ಈವರೆಗೂ ಒಟ್ಟು 11 ಪಂದ್ಯಗಳಲ್ಲಿ ಆಸೀಸ್ ಸವಾಲು ಎದುರಿಸಿದೆ. ಇದ್ರಲ್ಲಿ 2003ರಲ್ಲಿ ನಡೆದ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ. ಇನ್ನು 7 ಪಂದ್ಯಗಳಲ್ಲಿ ಸೋಲು ಕಂಡಿದೆ. 3 ಪಂದ್ಯಗಳನ್ನ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಡಿಲೇಡ್​ ಕದನದಲ್ಲಿ ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಇತಿಹಾಸ ಸೃಷ್ಠಿಸಬೇಕಾದ್ರೆ, ಬ್ಯಾಟ್ಸ್​​ಮನ್​ಗಳು ಅಬ್ಬರಿಸಬೇಕು. ಮುಖ್ಯವಾಗಿ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಆರಂಭಿಕ ಮುರಳಿ ವಿಜಯ್, ರನ್​ ಬರ ಎದುರಿಸುತ್ತಿರುವ ಕೆ.ಎಲ್.ರಾಹುಲ್, ಅಜಿಂಕ್ಯಾ ರಹಾನೆ, ಯುವ ಬ್ಯಾಟ್ಸ್​ಮನ್ ರಿಷಬ್ ಪಂತ್​ ತಮ್ಮ ಸಾಮರ್ಥ್ಯ ಪ್ರೂವ್ ಮಾಡಲೆಬೇಕಿದೆ.

ಟೀಮ್ ಇಂಡಿಯಾ ಬೌಲರ್ಸ್​​​ ಆಂಗ್ಲರ ನಾಡಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಈಗ ಆಸ್ಟ್ರೇಲಿಯಾ ವಿರುದ್ಧವೂ ಅದೇ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದ್ದಾರೆ. ಡೆಲ್ಲಿ ಎಕ್ಸ್​ಪ್ರೆಸ್​ ಇಶಾಂತ್ ಶರ್ಮಾ ಇಶಾಂತ್​ಗೆ ಜಸ್ಪ್ರೀತ್​ ಬೂಮ್ರಾ, ಮಹಮ್ಮದ್​ ಶಮಿ, ಭುವನೇಶ್ವರ್​ ಕುಮಾರ್, ಉಮೇಶ್​ ಯಾದವ್​ ತಂಡದ ಪ್ರಮುಖ ವೇಗಿಗಳಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ಆರ್. ಅಶ್ವಿನ್, ಕುಲ್​ದೀಪ್ ಯಾದವ್, ರವೀಂದ್ರಾ ಜಡೇಜಾ ಮೋಡಿ ಮಾಡಲು ಕಾತುರರಾಗಿದ್ದಾರೆ.

ಬೌಲಿಂಗ್​​ನಲ್ಲಿ ಬಲಿಷ್ಠವಾಗಿದೆ ಕಾಂಗರೂ ಪಡೆ
ಸತತ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳು ಹವಣಿಸುತ್ತಿದೆ. ಟೀಮ್ ಇಂಡಿಯಾಗೆ ಹೋಲಿಸಿದ್ರೆ ಬ್ಯಾಟಿಂಗ್​ನಲ್ಲಿ ಆಸ್ಟ್ರೇಲಿಯಾ ವೀಕ್ ಆಗಿದೆ. ಬಾಲ್​ ಟ್ಯಾಂಪರಿಂಗ್ ಪ್ರಕರಣದಿಂದ ನಿಷೇಧಕ್ಕೊಳಗಾಗಿರೋ ಬ್ಯಾಟಿಂಗ್ ಸ್ಟಾರ್ಸ್​​​, ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಈ ಸರಣಿಯಲ್ಲಿ ಆಡುತ್ತಿಲ್ಲ. ಆದ್ರೂ ತವರಿನಲ್ಲಿ ಆಡುತ್ತಿರುವ ಆಸೀಸ್ ಬ್ಯಾಟ್ಸ್​​ಮನ್​ಗಳನ್ನ ಕಡಿಮೆ ಲೆಕ್ಕ ಹಾಕೋಕೆ ಆಗಲ್ಲ.

ಆಸೀಸ್​​ ಬೌಲರ್ಸ್​ ಟೀಮ್ ಇಂಡಿಯಾ ಬ್ಯಾಟ್ಸ್​​ಮನ್​ಗಳ ರನ್​ದಾಹಕ್ಕೆ ಕಡಿವಾಣ ಹಾಕಲು ವಿಶೇಷ ಅಸ್ತ್ರಗಳನ್ನ ರೆಡಿಮಾಡಿಕೊಂಡಿದ್ದಾರೆ. ಎಡಗೈ ವೇಗಿ ಮಿಚೆಲ್​ ಸ್ಟಾರ್ಕ್, ಜೋಶ್​ ಹೆಜಲ್​ವುಡ್​, ಪ್ಯಾಟ್​ ಕಮ್ಮಿನ್ಸ್​​ ಟಿಮ್ ಪಡೆಯ ಪ್ರಮುಖ ವೇಗದ ಅಸ್ತ್ರಗಳಾಗಿದ್ರೆ, ನಾಥನ್ ಲೈಯನ್ ಆಸೀಸ್​​​ನ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.

ಅಂತಿಮ ಆಟಗಾರರನ್ನ ಪ್ರಕಟಿಸಿದ ಟೀಮ್ ಇಂಡಿಯಾ
ಮೊದಲ ಟೆಸ್ಟ್​ಗಾಗಿ ಟೀಮ್ ಇಂಡಿಯಾ ಅಂತಿಮ ಹನ್ನೆರೆಡು ಆಟಗಾರರ ತಂಡವನ್ನ ಪ್ರಕಟಿಸಿದೆ. ಕನ್ನಡಿಗ ಕೆ.ಎಲ್. ರಾಹುಲ್​, ರೋಹಿತ್​ ಶರ್ಮಾಗೆ ಸ್ಥಾನ ನೀಡಲಾಗಿದೆ.
ಭಾರತ ತಂಡ: ವಿರಾಟ್ ಕೊಹ್ಲಿ ( ನಾಯಕ), ಮುರಳಿ ವಿಜಯ್, ಕೆ.ಎಲ್​ ರಾಹುಲ್, ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್, ರವಿ ಅಶ್ವಿನ್, ಮೊಹಮ್ಮದ್​ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ ತಂಡದಲ್ಲಿದ್ದಾರೆ.