ಭಾರತದ ಬತ್ತಳಿಕೆಗೆ ಎಸ್​-400 ಟ್ರಯಂಫ್​, ಅಮೆರಿಕ ಕಣ್ಣಾಯ್ತು ಕೆಂಪು..!

ನವದೆಹಲಿ: ಇಂದು ನವದೆಹಲಿಯಲ್ಲಿ ನಡೆದ ರಷ್ಯಾ-ಭಾರತದ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಮಹತ್ವದ ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಉಭಯ ರಾಷ್ಟ್ರಗಳೂ ಸಹಿ ಹಾಕಿವೆ. ಅಮೆರಿಕಾದ ಆರ್ಥಿಕ ದಿಗ್ಬಂಧನ ಬೆದರಿಕೆಗೆ ಸೆಡ್ಡು ಹೊಡೆದಿರುವ ಭಾರತ ರಷ್ಯಾದೊಂದಿಗೆ ಕ್ಷೀಪಣಿ ಒಪ್ಪಂದಕ್ಕೆ ಸಹಿ ಹಾಕಿದೆ. ₹ 40,000 ಸಾವಿರ ಕೋಟಿ ವೆಚ್ಚದ ಮಹತ್ವದ ಒಪ್ಪಂದ ಇದಾಗಿದ್ದು, ಉಭಯ ರಾಷ್ಟ್ರಗಳೂ ಈಗ ಒಪ್ಪಂದಕ್ಕೆ ಒಪ್ಪಿ ಸಹಿ ಹಾಕಿವೆ.

ಎಸ್​-400 ಟ್ರಯಂಫ್​ ಸಾಮರ್ಥ್ಯ ಗೊತ್ತಾ!?

ಈ ಎಸ್​-400 ಕ್ಷಿಪಣಿಯನ್ನು ರಷ್ಯಾದ ಅಲ್ಮಾಜ್-ಆಂಟಿ ಕಂಪನಿ ಸಿದ್ಧಪಡಿಸಿದೆ. ಈ ಕ್ಷಿಪಣಿ ಬರೋಬ್ಬರಿ 400 ಕಿಲೋ ಮೀಟರ್ ವರೆಗಿನ ಶತ್ರುಗಳನ್ನ ಗುರುತಿಸಬಲ್ಲದು. ಇನ್ನೂ ವಿಶೇಷವೆಂದ್ರೆ ಶತ್ರು ವಿಮಾನಗಳನ್ನು 400 ಕಿಮೀ ದೂರದಲ್ಲಿಯೇ ಗುರುತಿಸಿ ನಿಖರವಾಗಿ ಅದರ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಅಂದರೆ ಜಮ್ಮುವಿನಲ್ಲೇ ಕುಳಿತು ಪಾಕಿಸ್ತಾನದ ಕ್ಷಿಪಣಿಗಳನ್ನ ಹೊಡೆದುರುಳಿಸಬಲ್ಲದು. ಸಿಕ್ಕಿಂ​ನಲ್ಲಿ ಕುಳಿತು ಚೀನಿಯರ ಕ್ಷಿಪಣಿಗಳನ್ನ ತಡೆದು ನಿಲ್ಲಿಸಬಹುದಾಗಿದೆ. ವಿಮಾನ ಮಾತ್ರವಲ್ಲದೇ ಶತ್ರುಗಳು ಹಾರಿಸುವ ಕ್ಷಿಪಣಿ, ಡ್ರೋಣ್​ಗಳನ್ನೂ ಗುರುತಿಸಿ ಆಕಾಶದಲ್ಲಿ ಹೊಡೆದುರುಳಿಸುತ್ತದೆ. ಇನ್ನು ನೆಲದಿಂದ 30 ಕಿಮಿ ಎತ್ತರದಲ್ಲಿ ನಿಖರ 36 ಕ್ಷಿಪಣಿಗಳನ್ನ ಏಕ ಕಾಲದಲ್ಲಿ ಹೊಡೆದುಹಾಕಬಲ್ಲದು ಎಸ್​-400. ಇನ್ನು ಸರಾಗವಾಗಿ ಬೇಕಾದಲ್ಲಿಗೆ ಸಾಗಿಸಬಹುದಾಗಿದ್ದು, ನಮ್ಮ ಗಡಿಭಾಗದಲ್ಲಿ ರಕ್ಷಣಾ ವ್ಯವಸ್ಥೆಗೂ ಅನುಕೂಲವಾಗಲಿದೆ. ಎಸ್​-400 ಕ್ಷಿಪಣಿ ಭಾರತದ ರಕ್ಷಣಾ ಬತ್ತಳಿಕೆಗೆ ಸೇರಿರುವುದರಿಂದ ಭಾರತದ ವಾಯುಪಡೆಗೆ ಆನೆ ಬಲ ಬಂದಂತಾಗಿದೆ ಅಂತಾ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ​.

ಅಮೆರಿಕಾದ ಆರ್ಥಿಕ ದಿಗ್ಬಂಧನಕ್ಕೇ ಸೆಡ್ಡು ಹೊಡೆದ ಮೋದಿ!

ಮೊದಲಿನಿಂದಲೂ ಅಮೆರಿಕಾ, ರಷ್ಯಾವನ್ನು ವಿರೋಧಿಸುತ್ತಲೇ ಬಂದಿದೆ. ರಷ್ಯಾದ ಎಸ್​-400 ಕ್ಷಿಪಣಿಯನ್ನು ಖರೀದಿಸಿತು ಎಂಬ ಕಾರಣಕ್ಕೆ ಚೀನಾವನ್ನು ಅಮೆರಿಕಾ ಆರ್ಥಿಕ ವಲಯದಲ್ಲಿ ನಿರ್ಬಂಧ ಹೇರಿತ್ತು. ಇದೇ ಮಾದರಿಯಲ್ಲಿ ಈಗ ಭಾರತವೂ ರಷ್ಯಾದಿಂದ ಕ್ಷಿಪಣಿ ಖರೀದಿಸಲು ಮುಂದಾಗಿದ್ದು ಭಾರತಕ್ಕೂ ಇದೇ ಎಚ್ಚರಿಕೆ ನೀಡಿತ್ತು. ಅಲ್ಲದೇ ರಷ್ಯಾ ಜೊತೆಗಿನ ಎಸ್​-400 ಕ್ಷಿಪಣಿ ಒಪ್ಪಂದ ಕೈಬಿಡಿ ಇಲ್ಲದಿದ್ದರೆ ನಿಮ್ಮ ಮೇಲೆ ಆರ್ಥಿಕ ದಿಗ್ಬಂದನ ಹೇರುತ್ತೇವೆ ಅಂತಾ ಅಮೆರಿಕಾ, ಭಾರತಕ್ಕೆ ಎಚ್ಚರಿಕೆ ನೀಡಿತ್ತು. ಈ ವಿಷಯದಲ್ಲಿ ನೀವು ಮುಂದುವರೆದರೆ, ಅದನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಮಟ್ಟದಲ್ಲಿ ನಿರ್ಬಂಧಗಳನ್ನು ಹೇರಬೇಕಾಗುತ್ತದೆ ಅಂತಾ ಭಾರತಕ್ಕೆ ಬೆದರಿಕೆಯೊಡ್ಡಿತ್ತು. ಆದ್ರೆ ಇದನ್ನ ಪರಿಗಣನೆಗೆ ತೆಗೆದುಕೊಳ್ಳದ ಭಾರತ, ಇಂದು ರಷ್ಯಾ ಜೊತೆ ಬಹುನಿರೀಕ್ಷಿತ ಎಸ್​-400 ಟ್ರಯಂಫ್​ ಕ್ಷಿಪಣಿ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತದ ಸ್ವಾಯತ್ತತೆ ಹಾಗೂ ರಕ್ಷಣೆ ವಿಚಾರ ಬಂದಾಗ ನಮಗೆ ಬೇರೆ ಯಾವುದೂ ಗಣನೆಗೇ ಬರುವುದಿಲ್ಲ ಎಂಬ ನೇರ ಸಂದೇಶವನ್ನೂ ಈ ಮೂಲಕ ಮೋದಿ ಅಮೆರಿಕಾಕ್ಕೆ ರವಾನಿಸಿದ್ದಾರೆ.

 

ಅಮೆರಿಕಾಕ್ಕೆ ಯಾಕೆ ಭಯ?

ತಜ್ಞರು ಹೇಳು ಪ್ರಕಾರ ಅಮೇರಿಕ ಬಳಿ ಇರುವ ಯಾವ ಕ್ಷಿಪಣಿಯೂ ಎಸ್​-400 ನಷ್ಟು ಸುಧಾರಿತವಲ್ಲ. ಇನ್ನು ಜಾಗತಿಕ ಮಟ್ಟದಲ್ಲಿ ಭಾರತ, ಅಮೆರಿಕಾಗೆ ಸೆಡ್ಡುಹೊಡೆಯುವಷ್ಟು ಬಲಿಷ್ಠವಾಗಿ ಬೆಳೆಯುತ್ತಿರುವುದು ಅಮೆರಿಕಾಕ್ಕೆ ಭಯ ಹುಟ್ಟಿಸಿದೆ. ಹಾಗೂ ಅಮೆರಿಕಾ ಮೊದಲಿನಿಂದಲೂ ರಷ್ಯಾ ವಿರೋಧಿಯಾಗಿದ್ದು, ರಷ್ಯಾ ಜೊತೆಗೆ ಭಾರತದ ಸಂಬಂಧ ವೃದ್ಧಿಯಾಗುವುದು ಅಮೇರಿಕಾಕ್ಕೆ ಸಹಿಸಲಸಾಧ್ಯ. ಇನ್ನು ರಕ್ಷಣಾ ವಿಚಾರದಲ್ಲಿ ಭಾರತ ಸ್ವಾವಲಂಬಿಯಾಗುತ್ತಿರುವುದು ಅಮೇರಿಕಾಗೆ ತಡೆಲಾಗುತ್ತಿಲ್ಲ. ಅಲ್ಲದೇ ಆರ್ಥಿಕವಾಗಿ ರಷ್ಯಾ ಬಲ ಸ್ವಲ್ಪ ಮಟ್ಟಿಗೆ ಕುಸಿದಿದ್ದು ಭಾರತ ಈಗ ರಷ್ಯಾಕ್ಕೆ ಸಹಾಯ ನೀಡುವುದೆಂಬ ಆತಂಕ ಅಮೆರಿಕಾಗಿದೆ.

ಶತ್ರುಗಳ ವಿರುದ್ಧ ತೊಡೆ ತಟ್ಟಿದ ಭಾರತ!

ಒಂದು ಕಡೆ ಚೀನಾ, ಇನ್ನೊಂದು ಕಡೆ ಪಾಕಿಸ್ತಾನ ಭಾರತಕ್ಕೆ ನಿರಂತರ ಕಿರುಕುಳ ನೀಡುತ್ತಲೇ ಬಂದಿವೆ. ಇನ್ನು ಪಾಕಿಸ್ತಾನ, ಚೀನಾದಿಂದ ಖರೀದಿಸಿದ 20 ಕ್ಕೂ ಹೆಚ್ಚು ಫೈಟರ್ ಜೆಟ್​ಗಳನ್ನ ಭಾರತದ ಕಡೆಗೇ ನೆಟ್ಟು ಕೂತಿದೆ. ಸುಧಾರಿತ ಎಫ್-16 ಮತ್ತು ಎಫ್​-17 ಕ್ಷಿಪಣಿಗಳನ್ನ ಇಟ್ಟುಕೊಂಡು ಭಾರತಕ್ಕೆ ನಿರಂತರ ಕಿರುಕುಳ ನೀಡುತ್ತಲೇ ಇದೆ. ಇನ್ನೊಂದೆಡೆ ಚೀನಾ 1700 ಯುದ್ಧ ವಿಮಾನ ಗಳನ್ನು ಹೊಂದಿದೆ. ಮೇಲಾಗಿ ಅದರಲ್ಲಿ 4th ಜನರೇಷನ್​ನ 800 ಯುದ್ಧ ವಿಮಾನಗಳಿವೆ. ಆದ್ರೆ ಇವುಗಳಿಗೆ ಹೋಲಿಸಿದ್ರೆ ಭಾರತದ ಬಳಿ ಅಂತಹ ಸುಧಾರಿತ ಕ್ಷಿಪಣಿಗಳಾಗಲಿ ಯುದ್ಧ ವಿಮಾನಗಳಾಗಲಿ ಇರಲಿಲ್ಲ ಸದ್ಯ ಎಸ್​-400 ಬಂದಿರುವುದು ಭಾರತಕ್ಕೆ ಆನೆ ಬಲ ಬಂದಂತಾಗಿದೆ.

ವಿಶೇಷ ಬರಹ: ಕೌಶಿಕ್ S.H

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv