3ಡಿಯಲ್ಲಿ ಸೃಷ್ಟಿಯಾಯ್ತು ಮಧ್ಯ ಯುಗದ ವೆನೆಂಗ್ ನಗರ..!

ಈ ಭೂಮಿ ತನ್ನ ಕಾಲ ಗರ್ಭದಲ್ಲಿ ಅದೆಷ್ಟೋ ವಿಷಯಗಳನ್ನು ಹುದುಗಿಸಿ ಕೊಂಡಿದೆ. ಸಾವಿರಾರು ವರ್ಷಗಳ ಹಿಂದೆ ನಡೆದ ಸಂಗತಿಗಳು ಭೂಮಿಯ ಒಡಲಲ್ಲಿ ಬೆಚ್ಚಗೆ ಮಲಗಿವೆ. ಅದನ್ನು ಹುಡುಕುವ ಹಾಗೂ ಹೊರತೆಗೆಯುವ ಕಾರ್ಯ ನಡೆದಿದ್ದರೂ, ಇನ್ನೂ ಬೆಳಕಿಗೆ ಬಾರದ ಅನೇಕ ಸಂಗತಿಗಳು ಹಾಗೆಯೇ ಉಳಿದುಕೊಂಡಿದೆ. ಶತಮಾನಗಳು ಕಳೆದಂತೆ ತನ್ನ ಅಸ್ಥಿತ್ವವನ್ನೇ ಕಳೆದುಕೊಂಡು ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ಹೀಗೆ ಶತಮಾನಗಳ ಹಿಂದೆ ಕಣ್ಮರೆಯಾದ ವೆನೆಂಗ್ ನಗರದ ಇಂಟರೆಸ್ಟಿಂಗ್​ ಸ್ಟೋರಿಯಿದು.
ಅದು 19ನೇ ಶತಮಾನದ ಸಮಯ. ಸೌಥ್​ ಆಫ್ರಿಕಾದ ಜೋಹಾನ್ಸ್​ ಬರ್ಗ್​ನ ವೆನೆಂಗ್​ ಎಂಬ ಪ್ರದೇಶದಲ್ಲಿ ಇಂಡಿಗೋನಸ್​ ಎಂಬ ಜನಾಂಗವೊಂದು ವಾಸವಾಗಿತ್ತು. ಈ ಪ್ರದೇಶ ಸ್ವಾನಾದ ರಾಜಧಾನಿಯೂ ಹೌದು. ಆದರೆ ಸ್ಥಳೀಯ ರಾಜರೊಂದಿಗೆ ನಡೆದ ಯುದ್ಧದಲ್ಲಿ ವೆನೆಂಗ್ ಪ್ರದೇಶ ಸಂಪೂರ್ಣ ನಾಶವಾಗುತ್ತೆ. ಬಳಿಕ ಪ್ರಾಕೃತಿಕ ಬದಲಾವಣೆಯಿಂದ ಕಾಲಗರ್ಭದಲ್ಲಿ ವೆನೆಂಗ್​ ನಗರ ಮುಚ್ಚಿ ಹೋಗಿತ್ತು. ಇದೀಗ ಮತ್ತೆ ಆ ನಗರವನ್ನು ಮರು ಸೃಷ್ಟಿಸಲಾಗಿದೆ. ಅಂದರೆ ವೆನೆಂಗ್​ ನಗರ ಹೇಗಿತ್ತು, ಅಲ್ಲಿ ಜನ ಜೀವನ ಪದ್ಧತಿ ಯಾವ ರೀತಿಯಾಗಿತ್ತು ಎಂಬ ಸಂಶೋಧನೆ ಕೈಗೊಂಡು ನಗರವನ್ನು ಡಿಜಿಟಲ್​ ತಂತ್ರಾಂಶದ ಮೂಲಕ ಚಿತ್ರಿಸಲಾಗಿದೆ.
ವಿಟ್​ವಾಟರ್ಸ್​ರಾಂಡ್ ಯುನಿವರ್ಸಿಟಿ ವಿದ್ಯಾರ್ಥಿಗಳು ಈ ಸ್ಥಳದ ಸಂಶೋಧನೆ ಕೈಗೊಂಡಿದ್ದು, ಕಳೆದ ಒಂದು ವರ್ಷದಿಂದ ವೆನೆಂಗ್​ ಪ್ರದೇಶದ ಸುತ್ತಮುತ್ತ ಸರ್ವೇ ಕಾರ್ಯ ಕೈಗೊಂಡು ನಗರದ ಸಂಪೂರ್ಣ ಮಾಹಿತಿ ಕಲೆಹಾಕಿದ್ದಾರೆ. ಇನ್ನೂ ನಗರದ ರೂಪು ರೇಷೆಯನ್ನು ಡಿಸೈನ್​ ಮಾಡಲು ‘ಲಿಡಾರ್’​ ಎಂಬ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗಿದ್ದು ಇದು ಬೆಳಕು ಹಾಗೂ ರೇಡಾರ್​ನ ಮಿಶ್ರಣವಾಗಿದೆ.
ವಿಟ್​ವಾಟರ್ಸ್​ರಾಂಡ್​ ಯುನಿವರ್ಸಿಟಿಯ ಸಂಶೋಧನಾ​ ವಿದ್ಯಾರ್ಥಿಗಳು ಹೇಳುವ ಪ್ರಕಾರ ಅಂದಿನ ಕಾಲಕ್ಕೆ ಸುಮಾರು 10000 ಮನೆಗಳನ್ನು ಈ ನಗರ ಹೊಂದಿತ್ತು. ಕಲ್ಲನ್ನು ಬಳಸಿ ಮಾಡಲಾದ ವೃತ್ತಾಕಾರದ ಕಂಪೌಂಡ್​ಗಳು ಹಾಗೂ ಅದರ ಮಧ್ಯದಲ್ಲಿ ಮನೆಗಳನ್ನು ನಿರ್ಮಿಸುವ ಪದ್ಧತಿಯನ್ನು ಇಂಡಿಗೋನಸ್ ಜನಾಂಗೀಯರು ಹೊಂದಿದ್ದರು. ವೆನೆಂಗ್​ ನಗರ ವ್ಯಾಪ್ತಿಯಲ್ಲಿ ದೊಡ್ಡದಾಗಿದ್ದು, 6.2 ಕಿಲೋಮೀಟರ್​ ಉದ್ದ ಹಾಗೂ 2 ಕಿಲೋಮೀಟರ್​ ಅಗಲ ಹೊಂದಿತ್ತು. ಈ ನಗರವನ್ನು ಮೆಸಪಟೋಮಿಯಾ ನಗರಕ್ಕೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡ ನಗರವೆನಿಸಿಕೊಂಡಿತ್ತು ಎಂದಿದ್ದಾರೆ.
ವೆನೆಂಗ್​ ನಗರದ ಮೊದಲ ಉತ್ಖನನ ಪ್ರಾರಂಭವಾಗಿದ್ದು, ಜೋಹಾನ್ಸ್​ ಬರ್ಗ್​ನಿಂದ 60 ಕಿಲೋಮೀಟರ್​ ದೂರದಲ್ಲಿರುವ ಸುಕೇರ್​ಬೋಸ್ರಾಂಡ್​ ಎಂಬ ಗುಡ್ಡ ಪ್ರದೇಶದಿಂದ. ಬಳಿಕ ವೆನೆಂಗ್​ ನಗರದ ಜಾಡು ಹಿಡಿದು ಹೊರಟ ಸಂಶೋಧನಾ ತಂಡ ಹಂತ ಹಂತವಾಗಿ ಉತ್ಖನನ ನಡೆಸಿ ಸಂಪೂರ್ಣ ನಗರವನ್ನು 3ಡಿಯಲ್ಲಿ ರಚನೆ ಮಾಡಿದೆ. ಇದಕ್ಕಾಗಿ ಸಂಶೋಧನಾ ತಂಡ ಸ್ಯಾಟಲೈಟ್ ಹಾಗೂ ಏರಿಯಲ್​ ಫೋಟೋವನ್ನೂ ಆಧಾರವಾಗಿ ಬಳಸಿಕೊಂಡಿದೆ.
ಒಟ್ಟಿನಲ್ಲಿ ಭೂಗರ್ಭಶಾಸ್ತಜ್ಞರ ಈ ಸಂಶೋಧನೆ ಒಂದು ಜನಾಂಗ ಹಾಗೂ ನಗರ ಜೀವನದ ಬಗ್ಗೆ ಬೆಳಕು ಚೆಲ್ಲಿದ್ದು, ಪೂರ್ವಜರ ಕುರಿತಾದ ಸಾಕಷ್ಟು ಮಾಹಿತಿ ಹೊರಬಿದ್ದಿದೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv