ಜಗತ್ತಿನ ಅತ್ಯಂತ ಆಳದ, ಪೆಸಿಫಿಕ್​​ ಸಮುದ್ರದ ತಳದಲ್ಲೂ ಪತ್ತೆಯಾಯ್ತು ಕಸ..!

ಕಸದ ಸಮಸ್ಯೆ ಎಲ್ಲಿಲ್ಲ ಹೇಳಿ. ರಸ್ತೆ ಬದಿಯಲ್ಲಿ, ಬಸ್​​ ಸ್ಟಾಪ್, ರೇಲ್ವೆ ಸ್ಟೇಷನ್, ಪ್ರವಾಸಿ ತಾಣಗಳು ಎಲ್ಲಿ ಹೋದ್ರೂ ತ್ಯಾಜ್ಯ, ಆಕಾಶದಲ್ಲಿ ವಾಯು ಮಾಲಿನ್ಯ, ಬಾಹ್ಯಾಕಾಶದಲ್ಲೂ ಸ್ಯಾಟಿಲೈಟ್ ಅವಶೇಷಗಳ ತ್ಯಾಜ್ಯ..ಈಗ ಸಮುದ್ರದ ಅತ್ಯಂತ ಆಳಕ್ಕೆ ಹೋದರೂ ಅಲ್ಲೂ ಕಸ ಸಿಕ್ಕಿದೆ.

ಹೌದು. ಜಗತ್ತಿನಲ್ಲೇ ಅತ್ಯಂತ ಆಳದ ಸ್ಥಳವಾದ ಪೆಸಿಫಿಕ್ ಸಮುದ್ರದ ಮರಿಯಾನಾ ಟ್ರೆಂಚ್​​ನಲ್ಲಿ ಈವರೆಗೆ ಮಾನವ ಹೋಗಿರದಷ್ಟು ಅತ್ಯಂತ ಆಳಕ್ಕೆ ಹೋದಾಗ, ತಳದಲ್ಲಿ ಕಸ ಸಿಕ್ಕಿದೆ. ನಿವೃತ್ತ ನೌಕಾಧಿಕಾರಿ ವಿಕ್ಟರ್​​ ವೆಸ್ಕೋವೋ ಸಬ್​​ಮರೀನ್​​ನಲ್ಲಿ ಸುಮಾರು 35,853 ಅಡಿ(6.8 ಮೈಲಿ) ಆಳಕ್ಕೆ ಹೋಗಿ ಇದುವರೆಗೂ ಪತ್ತೆಯಾಗಾದ ಕೆಲವು ವಿಶಿಷ್ಟ ಜೀವಿಗಳನ್ನ ಇಲ್ಲಿ ಪತ್ತೆ ಮಾಡಿದ್ದಾರೆ. ಇದಕ್ಕಾಗಿ ಅವರು ಟ್ರೆಂಚ್​​ನಲ್ಲಿ ಸುಮಾರು 4 ಗಂಟೆಗಳ ಸಮಯ ಕಳೆದಿದ್ದಾರೆ. ಈ ವೇಳೆ ಸೀಗಡಿಯಂತೆ ಕಾಣುವ ಉದ್ದ ಕಾಲುಗಳುಳ್ಳ ಜೀವಿ, ಪಾರದರ್ಶಕ ಸಮುದ್ರ ಹಂದಿಗಳು ಮುಂತಾದ ಜೀವಗಳನ್ನ ಅನ್ವೇಷಿಸಿದ್ದಾರೆ. ಇವುಗಳ ಜೊತೆಗೆ ಒಂದು ಮೆಟಲ್​ ಅಥವಾ ಪ್ಲಾಸ್ಟಿಕ್​​ ವಸ್ತು ಕೂಡ ಅವರಿಗೆ ಸಿಕ್ಕಿದೆ. ಇಷ್ಟು ಆಳಕ್ಕೂ ಪ್ಲಾಸ್ಟಿಕ್​ ತ್ಯಾಜ್ಯ ಬಂದು ಸೇರಿದೆಯಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಆ ಪ್ಲಾಸ್ಟಿಕ್ ವಸ್ತುವಿನ ಮೇಲೆ ಬರವಣಿಗೆ ಕೂಡ ಇತ್ತು ಎಂದು ಅವರು ಹೇಳಿದ್ದಾರೆ. ಈ ಹಿಂದೆ 2016ರಲ್ಲಿ ಕೂಡ ಇದೇ ಮರಿಯಾನಾ ಟ್ರೆಂಚ್​ನಲ್ಲಿ ಪ್ಲಾಸ್ಟಿಕ್ ಕವರ್​ ಹಾಗೂ ಡಬ್ಬಿಯೊಂದು ಸಿಕ್ಕಿತ್ತು.

2016ರಲ್ಲಿ ಮರಿಯಾನಾ ಟ್ರೆಂಚ್​ನಲ್ಲಿ ಸಿಕ್ಕ ಪ್ಲಾಸ್ಟಿಕ್ ಕವರ್

ವಿಶ್ವದಾದ್ಯಂತ ಸಮುದ್ರಗಳಲ್ಲಿ ಈವರೆಗೆ ಸುಮಾರು 10 ಕೋಟಿ ಟನ್​​ ಪ್ಲಾಸ್ಟಿಕ್​​ ತ್ಯಾಜ್ಯ ಹಾಕಲಾಗಿದೆ ಎಂದು ಅಮೇರಿಕಾ ವರದಿ ಮಾಡಿದೆ. ಸಮುದ್ರ ತೀರದಲ್ಲಿ ಹಾಕುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಮೀನುಗಳು ಹಾಗು ಇತರೆ ಜಲಚರಗಳ ಪ್ರಾಣಕ್ಕೆ ಕುತ್ತು ತರುತ್ತದೆ. ಸಮುದ್ರದ ದಡದಲ್ಲಿ ಮಾತ್ರವಲ್ಲದೆ,  ಕಸ ಆಳದ ಪ್ರದೇಶಕ್ಕೂ ಹೋಗುತ್ತಿದೆ. ಸಮುದ್ರದಾಳದಲ್ಲಿ ವಾಸಿಸುವಂತ ತಿಮಿಂಗಿಲಗಳ ಹೊಟ್ಟೆಯಲ್ಲೂ ಪ್ಲಾಸ್ಟಿಕ್​​ ತ್ಯಾಜ್ಯ ಸಿಕ್ಕಿರುವ ಸಾಕಷ್ಟು ಪ್ರಕರಣಗಳಿವೆ. ಈಗ ಇಷ್ಟು ಆಳಕ್ಕೂ ಪ್ಲಾಸ್ಟಿಕ್ ಕಸ ಹೋಗಿ ತಲುಪಿರುವುದು ಆತಂಕಪಡುವಂತಹ ವಿಷಯ.

ಸಮುದ್ರದ ಅತ್ಯಂತ ಆಳದ ಪ್ರದೇಶವನ್ನೂ ಮನುಷ್ಯ ಮಲಿನಗೊಳೀಸಿರುವುದು ನಿಜಕ್ಕೂ ವಿಷಾದದ ಸಂಗತಿ ಎಂದು ವೆಸ್ಕೋವೋ ಹೇಳಿದ್ದಾರೆ.

2016ರಲ್ಲಿ ಮರಿಯಾನಾ ಟ್ರೆಂಚ್​ನಲ್ಲಿ ಸಿಕ್ಕ ಡಬ್ಬಿ

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv