ಭಾರತದಲ್ಲಿ ಅಣುಬಾಂಬ್​ ಇರುವುದು ದೀಪಾವಳಿಗಾ?: ನರೇಂದ್ರ ಮೋದಿ

ಜೈಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ನಡೆಸಿದ ಚುನಾವಣಾ ಱಲಿಯಲ್ಲಿ ಮತ್ತೆ ಸರ್ಜಿಕಲ್​ ಸ್ಟ್ರೈಕ್​ ಹಾಗೂ ಏರ್​ಸ್ಟ್ರೈಕ್​ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನವನ್ನು ತರಾಟೆ ತೆಗೆದುಕೊಂಡ ನರೇಂದ್ರ ಮೋದಿ, ಪಾಕಿಸ್ತಾನ ಸದಾ ತನ್ನ ಬಳಿ ಅಣುಬಾಂಬ್​, ಅದರ ಬಟನ್​ ಒತ್ತುತ್ತೇವೆ ಎನ್ನುತ್ತಲೇ ಇದೆ. ಹಾಗಾದರೆ ನಮ್ಮ ಬಳಿ ಇರುವ ಅಣುಬಾಂಬ್​ ದೀಪಾವಳಿ ಹಬ್ಬಕ್ಕಾ ಅಂತ ವ್ಯಂಗ್ಯವಾಡಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಅಣುಬಾಂಬ್​ನ ವಾರ್ನಿಂಗ್​ ಕೊಟ್ಟಿರುವ ಮೋದಿ ಕಾಂಗ್ರೆಸ್​ ಪಕ್ಷವನ್ನು ಕೂಡ ಟೀಕಿಸಿದ್ದಾರೆ.

1971 ರಲ್ಲಿ ಕಾಶ್ಮೀರದ ವಿವಾದವನ್ನು ಬಗೆಹರಿಸಲು ಕಾಂಗ್ರೆಸ್​ ಸರ್ಕಾರಕ್ಕೆ ಸುವರ್ಣಾವಕಾಶ ಇತ್ತು. ಆದರೆ, ಅಂತಾರಾಷ್ಟ್ರೀಯ ಒತ್ತಡದಿಂದ ಒತ್ತೆಯಾಳಾಗಿದ್ದ 90 ಸಾವಿರಕ್ಕೂ ಅಧಿಕ ಪಾಕ್​ ಸೈನಿಕರನ್ನ ರಿಲೀಸ್​ ಮಾಡಿದ ಅಂದಿನ ಕಾಂಗ್ರೆಸ್​ ಸರ್ಕಾರ, ಶತ್ರುರಾಷ್ಟ್ರ ವಶಕ್ಕೆ ಪಡೆದುಕೊಂಡಿದ್ದ ಕಾಶ್ಮೀರದ ಭಾಗವನ್ನು ವಾಪಸ್​ ಪಡೆಯುವ ಪ್ರಯತ್ನವನ್ನು ಶಿಮ್ಲಾ ಒಪ್ಪಂದದ ವೇಳೆ ಮಾಡಲಿಲ್ಲ ಅಂತಾ ದೂರಿದ್ರು. ಅಲ್ಲದೇ ಅದರ ಪರಿಣಾಮವನ್ನು ದೇಶವೀಗ ಎದುರಿಸುವಂತಾಗಿದೆ ಎಂದ ನರೇಂದ್ರ ಮೋದಿ, ಈಗ ಭಾರತ ಪಾಕಿಸ್ತಾನದ ಅಣುಬಾಂಬ್​ ಬೆದರಿಕಗೆ ಬಗ್ಗುವುದಿಲ್ಲ ಎಂದಿದ್ದಾರೆ. ಭಾರತೀಯ ಸೈನಿಕರು ಯುದ್ಧವಿಲ್ಲದೇ , ಭಯೋತ್ಪಾದಕರನ್ನು ಹೊಡೆದುರಿಳಿಸಿದ್ದನ್ನು ಪ್ರಸ್ತಾಪಿಸಿದ ಮೋದಿ ತಮ್ಮ ಸರ್ಕಾರವನ್ನು ಬಲಿಷ್ಟ ಸರ್ಕಾರ ಅಂತಾ ಬಣ್ಣಿಸಿಕೊಂಡರು. ಅಲ್ಲದೇ ನಮ್ಮ ಸರ್ಕಾರ ಪಾಕಿಸ್ತಾನದ ಅಹಂಕಾರವನ್ನು ಹೊಡೆದುಹಾಕಿದ್ದಷ್ಟೆ ಅಲ್ಲದೇ ವಿಶ್ವದೆಲ್ಲೆಡೆ ಹಣಕ್ಕಾಗಿ ಭಿಕ್ಷೆ ಬೇಡುವಂತೆ ಮಾಡಿದ್ದೇವೆ ಎಂದಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv