ನಿಖಿಲ್‌ಗೆ 15ದಿನದಲ್ಲಿ ಭತ್ತ ನಾಟಿ, ಕಬ್ಬು ಅರೆಯೋದು ಕಲಿಸಿದ್ದೀರಿ: ಸಿಎಂ‌ ಕುಮಾರಸ್ವಾಮಿ

ಮಂಡ್ಯ: 15 ದಿನಗಳಲ್ಲಿ ನಿಖಿಲ್ ಊರೂರು ಸುತ್ತಿ ಪ್ರಚಾರ ಮಾಡುತ್ತಿದ್ದಾನೆ. ನಿಖಿಲ್‌ಗೆ ಭತ್ತ ನಾಟಿ, ಹೊಲ ಉಳುಮೆ, ಆಲೆಮನೆಯಲ್ಲಿ ಕಬ್ಬು ಅರೆಯುವುದನ್ನ ಕಲಿಸಿಕೊಟ್ಟಿದ್ದೀರಿ. ನನ್ನನ್ನ ಮಂಡ್ಯ ಸಿಎಂ ಅಂತ ಕರೆಯುವ ಬಿಜೆಪಿ ಬಗ್ಗೆ ಎಚ್ಚರಿಕೆಯಿಂದಿರಿ ಅಂತಾ  ಸಿಎಂ‌ ಕುಮಾರಸ್ವಾಮಿ ಹೇಳಿದ್ದಾರೆ.

ಪಾಂಡವಪುರದ ಮೈತ್ರಿ ಸಮಾವೇಶದಲ್ಲಿ  ಮಾತನಾಡಿದ ಸಿಎಂ‌ ಕುಮಾರಸ್ವಾಮಿ, ದೇವೇಗೌಡರು ಪ್ರಧಾನಿ ಆಗಲು ಚಂದ್ರಬಾಬು ನಾಯ್ಡು ಪ್ರಮುಖರಲ್ಲೊಬ್ಬರು. ಅಮರಾವತಿಯಿಂದ ಇಲ್ಲಿವರೆಗೆ ಬಂದು ಪ್ರಚಾರ‌ ಮಾಡಿದ್ದಾರೆ. ಜೆಡಿಎಸ್ ಬೆಂಬಲಿಸುತ್ತಿರುವ ಚಂದ್ರಬಾಬು ನಾಯ್ಡುಗೆ  ನನ್ನ ಧನ್ಯವಾದಗಳು. ನಮ್ಮ ತಂದೆ ದೇವೇಗೌಡ್ರು ಇದ್ಲೂರು ಜಲಾಶಯ ನಿರ್ಮಿಸಿದ್ದರು. ಅಂದು ನಮ್ಮ ತಂದೆಯ ಪುತ್ಥಳಿ ಅನಾವರಣ ಕಾರ್ಯಕ್ರಮವಿತ್ತು. ಆದ್ರೆ  ಕನಗಮಮರಡಿ ಬಸ್ ದುರಂತ ತಿಳಿಯುತ್ತಲೇ ಕಾರ್ಯಕ್ರಮ ರದ್ದುಗೊಳಿಸಿ  ನಾನು ಇಲ್ಲಿಗೆ ಓಡೋಡಿ ಬಂದೆ. ಪಾಂಡವಪುರ ಸಕ್ಕರೆ ಕಾರ್ಖಾನೆ ದುಃಸ್ಥಿತಿಗೆ ಕಾರಣ ಯಾರು ರೈತಸಂಘದ ಕಾರ್ಯಕರ್ತರೆ? ಮುಂದಿನ 6 ತಿಂಗಳೊಳಗೆ ಪುನಾರಾರಂಭ ಮಾಡಲು ನಿರ್ಧರಿಸಿದ್ದೇನೆ. ಯಾವ ಕಾರಣದಿಂದ ರೈತ ಸಂಘದವರು‌ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡ್ತೀರಾ? ಮೇಲುಕೋಟೆ ಕ್ಷೇತ್ರದಲ್ಲಿ ಪುಟ್ಟರಾಜು ಅನುಕಂಪದ ಅಲೆಯಲ್ಲಿ ಕೊಚ್ಚಿ ಹೋಗ್ತಾರೆ ಅಂತ ರಾಜ್ಯಾದ್ಯಂತ ಚರ್ಚೆಯಾಗಿತ್ತು, ಆದ್ರೆ ಇಲ್ಲಿನವರು ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ರಿ. ನಂತರ ಚುನಾವಣೆಯಲ್ಲಿ  ಪುಟ್ಟರಾಜು ಎದುರಾಳಿಯಾಗಿದ್ದವರು ಚುನಾವಣೆ ಬಳಿಕ ನಾಪತ್ತೆಯಾಗಿದ್ದರು.

ಮಂಡ್ಯ ಜಿಲ್ಲೆ ಒಂದರಲ್ಲೇ 400 ಕೋಟಿಯಷ್ಟು ಸಾಲ ಮನ್ನಾ ಆಗಿದೆ
ರೈತರು ಆತ್ಮಹತ್ಯೆ‌ ಮಾಡಿಕೊಂಡಾಗ ಇತ್ತ ಸುಳಿಯದವರು, ಈಗ ಸ್ವಾಭಿಮಾನದ ಹೆಸರು ಹೇಳಿಕೊಂಡು ಇಲ್ಲಿಗೆ ಬಂದಿದ್ದಾರೆ. ಅಮೆರಿಕಾ ಯಾತ್ರೆ ಮುಗಿಸಿ ಈಗ ಬಂದು ಪಕ್ಷೇತರ ಅಭ್ಯರ್ಥಿ ಪರ ಮತ ಯಾಚನೆ ಮಾಡ್ತಿದ್ದಾರೆ. ಇಂತಹವರನ್ನ ರೈತ ನಾಯಕರು ಅಂತಾ ಹೇಗೆ ಒಪ್ಪಿಕೊಳ್ತಾರೆ ಅಂತಾ ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಮೈಶುಗರ್ ಕಾರ್ಖಾನೆ ಬಾಕಿ ಹಣ, ನೀರಾವರಿ ಕಾಲುವೆ ಆಧುನೀಕರಣ, ನಾಲೆ ಪಕ್ಕದ ರಸ್ತೆಗಳಿಗೆ ತಡೆಗೋಡೆ ನಿರ್ಮಾಣ, ಸಾಲಮನ್ನಾದಂತ ಮಹತ್ವದ ಕಾರ್ಯಕ್ರಮಗಳನ್ನ ನಾನು ಮಂಡ್ಯಕ್ಕೆ ನೀಡಿದ್ದೇನೆ. ರಾಜ್ಯದಲ್ಲಿ ಈಗಾಗಲೇ 11 ಸಾವಿರ ಕೋಟಿ ಸಾಲ ಮನ್ನಾ ಹಣ ಬಿಡುಗಡೆ ಮಾಡಿದ್ದೇನೆ. ಅದರಲ್ಲಿ ಮಂಡ್ಯ ಜಿಲ್ಲೆ ಒಂದರಲ್ಲೇ 400 ಕೋಟಿಯಷ್ಟು ಸಾಲ ಮನ್ನಾ ಆಗಿದೆ.  ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ‌ ನೀಡಲು ಕಾರ್ಯಕ್ರಮ ರೂಪಿಸಿದ್ದೇನೆ. ಕರೆಂಟ್ ಪ್ರಾಬ್ಲಮ್ ನನ್ನ ತಪ್ಪಿನಿಂದ ಆಗಿಲ್ಲ. ನಾನು 2 ಬೋರ್‌ವೆಲ್‌ಗೆ ಒಂದರಂತೆ ಒಂದು ಟ್ರಾನ್ಸ್‌ಫಾರ್ಮರ್ ಅಳವಡಿಸಲು ಕ್ರಮ ಕೈಗೊಳ್ಳುತ್ತೇನೆ. ನಾಳೆ ಪಾಪ ಸ್ವಾಭಿಮಾನಿ ಸಮ್ಮೇಳನವಂತೆ. ರೈತರ ಸಮಸ್ಯೆಗೆ ಸ್ಪಂದಿಸದವರು, ಈಗ ಸ್ವಾಭಿಮಾನದ ಹೆಸರಲ್ಲಿ‌  ಮಂಡ್ಯಕ್ಕೆ ಬಂದಿದ್ದಾರೆ. ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ಕೊಂಡೊಯ್ಯಲು ಆಸ್ಪತ್ರೆ ಒಳಗೆ ಜಗಳ ಶುರುವಾಯ್ತು. ಆಗ  ಒಬ್ಬರು ಮಂಡ್ಯಕ್ಕೆ ಶವ ಕೊಂಡೊಯ್ಯಬೇಕು  ಅಂದಾಗ ಒಪ್ಪಿಕೊಳ್ಬೇಡ ಮಗನೇ ಅಂದಿದ್ರು. ನಾನು ಇದನ್ನ ಹೇಳಿದ್ರೆ ಅಂತ್ಯಕ್ರಿಯೆ ರಾಜಕೀಯ ಮಾಡ್ತಾರೆ ಅಂತ ಹೇಳ್ತಾರೆ ಅಂತಾ ಪರೋಕ್ಷವಾಗಿ ಸುಮಲತಾ ಮೇಲೆ ಕಿಡಿಕಾರಿದ್ರು.

ನಾನೆಂದೂ ರಾಮನಗರದಲ್ಲಿ ಓಟ್ ಕೇಳಲು ಹೋಗಿರಲಿಲ್ಲ. ಕೇವಲ ಅರ್ಜಿ ಹಾಕಿ ಬರುತ್ತೇನೆ, ಜನ ನನ್ನ ಮೇಲೆ ವಿಶ್ವಾಸವಿಟ್ಟುಕೊಂಡಿದ್ದಾರೆ. ನಾನು ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಸುತ್ತಿ ನಿಮ್ಮ ಪ್ರೀತಿ ವಿಶ್ವಾಸ ನೋಡಿದೆ. ಅದರಂತೆ ನನ್ನ ಮೇಲೆ ವಿಶ್ವಾಸವಿಟ್ಟು ಏಳಕ್ಕೆ ಏಳು ಸೀಟು ಗೆಲ್ಸಿದ್ದೀರ. ಹೀಗಾಗಿ ನಿಮ್ಮ ಋಣ ತೀರಿಸಲು ನಿಖಿಲ್ ಕಣಕ್ಕಿಳಿಸಿದ್ದೇವೆ. ಡಿಸ್ನಿಲ್ಯಾಂಡ್‌ ಯೋಜನೆಗೆ ರೈತರ ಯಾವುದೇ  ಜಮೀನು ವಶಪಡಿಸಿಕೊಳ್ಳಲ್ಲ. ರೈತರ ಅಭಿವೃದ್ಧಿಗಾಗಿ ಆ ಯೋಜನೆ ಜಾರಿಗೆ ತಂದಿದ್ದೇವೆ. ನಾನು ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಭವಿಷ್ಯದ ದೃಷ್ಟಿಯಿಂದ ಯುವನಾಯಕ  ನಿಖಿಲ್​ ಅಗತ್ಯವಿದೆ ಎಂದು‌ ಮಂಡ್ಯ ಶಾಸಕರು ಒತ್ತಡ ಹೇರಿದ್ರು. ನನಗಿಂತ ನಿಖಿಲ್ ಹೆಚ್ಚು ಮಾನವೀಯತೆಯುಳ್ಳವನು. ಬೇರೆಯವರ ರೀತಿ ಅನುಕಂಪ, ಬಣ್ಣದ ಮಾತುಗಳನ್ನ ಹೇಳಿಕೊಂಡು ಬರುವವನಲ್ಲ. ಇನ್ನು 4 ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರುತ್ತೆ, ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಸರ್ಕಾರ ಉಳಿಸಲಿಕ್ಕೆ ಚಂದ್ರಬಾಬು ನಾಯ್ಡು ರಕ್ಷಣೆ ನಮಗಿದೆ. ಮಂಡ್ಯದಲ್ಲಿ ಕುತಂತ್ರದ ರಾಜಕಾರಣ ನಡೆಯುತ್ತಿದೆ. ಜಾತಿಯನ್ನ‌ ಮುಂದಿಟ್ಟುಕೊಂಡು ಕೆಲವರು ಜನರ ಮುಂದೆ ಹೋಗಿದ್ದಾರೆ. ನಿಮ್ಮ‌ ಮನೆ ಮಗ ರಾಜಕೀಯದಲ್ಲಿ ಮುಂದುವರೆಯೋಬೇಕೊ ಬೇಡ್ವೋ ಯೋಚನೆ ಮಾಡಿ. ಇನ್ನ, ಕಳ್ಳೆತ್ತುಗಳ ಬಗ್ಗೆ ಮಾತನಾಡೋದು ಬೇಡ.
ಅವು 18 ತಾರೀಖು ಆದಮೇಲೆ ಹೋಗ್ತಾವೆ ಅಂತಾ ಇದೆ ವೇಳೆ ಸಿಎಂ‌ ಕುಮಾರಸ್ವಾಮಿ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv