ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೈದಿದ್ದ ಪತ್ನಿ ಅರೆಸ್ಟ್​

ತುಮಕೂರು: ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತಿದ್ದಾಗ ಚಿಗುರೊಡೆದ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಇದೇ ಅನೈತಿಕ ಸಂಬಂಧ ಪತಿಯನ್ನು ಕೊಲೆ ಮಾಡೋ ಹಂತಕ್ಕೆ ಬಂದು ತಲುಪಿತ್ತು. ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಜೂನ್​ 16ರಂದು ಹತ್ಯೆ ಮಾಡಿದ್ದ ಜೋಡಿಯನ್ನು ಶಿರಾ ಪೊಲೀಸರು ಬಂಧಿಸಿದ್ದಾರೆ.
ಮೃತನ ಪತ್ನಿ ಸಂಗೀತಾ ಹಾಗೂ ಆಕೆಯ ಪ್ರಿಯಕರ ತಿಪ್ಪೇಸ್ವಾಮಿ ಬಂಧಿತ ಆರೋಪಿಗಳು. ಜೂನ್‌16 ರಂದು ಸೋಮಸಾಗರ ಗೇಟ್ ಬಳಿ ಅರೆಬರೆ ಸುಟ್ಟು ಹೊಗೆಯಾಡುತ್ತಿದ್ದ ಶವವೊಂದು ಪತ್ತೆಯಾಗಿತ್ತು. ಅದು ಆರೋಪಿ‌ ಸಂಗೀತಾ ಪತಿ ನಾಗಾನಂದನ ಶವವಾಗಿತ್ತು. ಅನೈತಿಕ ಸಂಬಂಧಕ್ಕೆ‌ ಅಡ್ಡಿಯಾಗುತ್ತಿದ್ದಾನೆ ಅನ್ನೋ ಕಾರಣಕ್ಕೆ ಪತ್ನಿ ಸಂಗೀತಾ ಹಾಗೂ ಪ್ರಿಯಕರ ತಿಪ್ಪೆಸ್ವಾಮಿ ಸೇರಿ ಕೊಲೆಮಾಡಿದ್ದರು.
ಆರೋಪಿ ತಿಪ್ಪೇಸ್ವಾಮಿ ಹತ್ಯೆಯಾದ ನಾಗಾನಂದನನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗುವ‌ ನೆಪದಲ್ಲಿ ದಾರಿ ಮಧ್ಯೆ ಹತ್ಯೆ ಮಾಡಿದ್ದಾರೆ. ಮೃತ ನಾಗಾನಂದನಿಗೆ ಮದ್ಯ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ‌ ಸಾಯಿಸಿದ್ದು, ಬಳಿಕ ಪೆಟ್ರೋಲ್ ಹಾಕಿ ಸುಟ್ಟು ಪರಾರಿಯಾಗಿದ್ದರು. ಅರೆಬರೆ ಸುಟ್ಟು ಹೊಗೆಯಾಡುತಿದ್ದ ಶವ ಪತ್ತೆಯಾಗಿತ್ತು. ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರಕರಣದ ಬೆನ್ನತ್ತಿ ಹೊರಟ ಪಿಎಸ್ಐ ರವಿಕುಮಾರ್ ನೇತೃತ್ವದ ತಂಡ ಈ ಆರೋಪಿಗಳನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv