ಬೆಂಗಳೂರಿಗೆ ಜಾನುವಾರು ಅಕ್ರಮ ಸಾಗಣೆ, ಲಾರಿ ತಡೆದ ಕನ್ನಡ ಸಂಘಟನೆ

ದಾವಣಗೆರೆ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನಿಂದ ಬೆಂಗಳೂರಿಗೆ ಅಕ್ರಮವಾಗಿ ಗೋವು ಸಾಗಣಿಕೆ ಮಾಡುತ್ತಿದ್ದ ಲಾರಿಯನ್ನು ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ.
ರಾಣೆಬೆನ್ನೂರುನಿಂದ ದಾವಣಗೆರೆ ಮಾರ್ಗವಾಗಿ ಬೆಂಗಳೂರಿಗೆ ಸಾಗುತ್ತಿದ್ದ ಓಂ ಲಾಜಿಸ್ಟಿಕ್​ ಹೆಸರಿನ ಲಾರಿಯಲ್ಲಿ 07 ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಲಾರಿಯನ್ನು ನಿಲ್ಲಿಸಿದ್ದಾರೆ. ಲಾರಿಯಲ್ಲಿ 7 ಜಾನುವಾರುಗಳು ಇರುವುದು ಕಂಡುಬಂದಿದೆ. ಕೂಡಲೇ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ದಾವಣಗೆರೆ ಗ್ರಾಮಾಂತರ ಪೊಲೀಸ್​ ಠಾಣೆ ಪೊಲೀಸರು ಲಾರಿ ಕ್ಲೀನರ್​​ನನ್ನು ಬಂಧಿಸಿದ್ದಾರೆ. ಇನ್ನು ಲಾರಿಯನ್ನು ಸ್ಥಳದಲ್ಲೇ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.