ಅಹಮದಾಬಾದ್ ಪೊಲೀಸರಿಗೆ ಅಮೆರಿಕಾದ ಎಫ್​ಬಿಐ ನೆರವು..!

ಅಹಮದಾಬಾದ್​: ನಾವು ಬ್ಯಾಂಕ್​ನಿಂದ ಕರೆ ಮಾಡ್ತಿದ್ದೀವಿ. ನಿಮ್ಮ ಖಾತೆಗೆ ಹಣ ಬಂದಿದೆ. ಅದನ್ನ ಈ ಕೂಡಲೇ ಪಡೆಯೋಕೆ ಕೆಲ ಮಾಹಿತಿಯ ಅವಶ್ಯಕತೆ ಇದೆ. ಅದನ್ನ ಕೊಡಿ ಅಂತ ನಿಮಗೆ ಯಾವುದಾದ್ರೂ ಫೋನ್ ಕರೆ ಬಂದಿದೆಯಾ? ಯಾವ ಲಾಟರಿ ಹೊಡೀತೋ ಅಂತ ನೀವೇನಾದ್ರೂ ಆ ಹಣಕ್ಕೆ ಆಸೆ ಬಿದ್ದು, ನಿಮ್ಮ ಅಕೌಂಟ್ ಡಿಟೇಲ್ಸ್ ಎಲ್ಲಾ ಕೊಟ್ರೋ, ನೀವು ಕೆಟ್ರಿ ಅಂತಲೇ ಅರ್ಥ. ಯಾಕಂದ್ರೆ ನಿಮ್ಮ ಅಕೌಂಟ್​ಗೆ ಅವ್ರು ಹೇಳಿದ ಅಮೌಂಟ್ ಬರುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ನಿಮ್ಮ ಖಾತೆಯಲ್ಲಿರುವ ನಿಮ್ಮ ಕಷ್ಟಾರ್ಜಿತ ಹಣ ಮಾತ್ರ ಕಣ್ ಮುಚ್ಚಿ ತೆಗೆಯೋದ್ರಲ್ಲಿ ಮಂಗ ಮಾಯವಾಗಿರುತ್ತೆ. ಯಾಕಂದ್ರೆ ನಿಮಗೆ ಬರೋ ಕರೆ, ನಕಲಿ. ಅದು ಬರೋದು ಕೂಡ ನಕಲಿ ಕಾಲ್​ ಸೆಂಟರ್​ಗಳಿಂದಲೇ.
ಭಾರತದಲ್ಲಿ ಇಂಥ ನಕಲಿ, ಅಕ್ರಮ ಕಾಲ್​ ಸೆಂಟರ್​ಗಳ ಹಾವಳಿ ಹೆಚ್ಚಾಗ್ತಿದೆ. ಹೀಗಾಗಿ ಭಾರತ ಸರ್ಕಾರವೂ ಇದನ್ನ ತಡೆಗಟ್ಟೋಕೆ ಸಾಕಷ್ಟು ಕ್ರಮಗಳನ್ನ ಕೈಗೊಳ್ತಿದೆ. ಸದ್ಯ ಗುಜರಾತ್​ನ ಅಹಮದಾಬಾದ್​ ಪೊಲೀಸರು, ಇಂಥ ನಕಲಿ ಕಾಲ್​ ಸೆಂಟರ್​ಗಳಿಗೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದಾರೆ. ಅವರು ಈಗಾಗಲೇ ತನಿಖೆ ಆರಂಭಿಸಿದ್ದು, ಇದರಲ್ಲಿ ಅಮೆರಿಕಾ ಪ್ರಜೆಗಳೂ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈಗ ಅಹಮದಾಬಾದ್ ಪೊಲೀಸರ ಜೊತೆ ಅಮೆರಿಕಾದ ತನಿಖಾ ಸಂಸ್ಥೆ ಎಫ್​ಬಿಐ ಕೂಡ ಇನ್​ವೆಸ್ಟಿಗೇಷನ್​ಗೆ ಕೈ ಜೋಡಿಸಿದೆ.
ಅಹಮದಾಬಾದ್ ಪೊಲೀಸರು ಹಲವೆಡೆ ದಾಳಿ ನಡೆಸಿ, ನಕಲಿ ಕಾಲ್ ಸೆಂಟರ್​ಗಳನ್ನ ಮುಚ್ಚಿದ್ದಾರೆ. ಇದರ ಬಗ್ಗೆ ತನಿಖೆ ನಡೆಸ್ತಿದ್ದು, ಅಮೆರಿಕಾ ಪ್ರಜೆಗಳಿಗೂ ಇದೇ ರೀತಿ ಟೋಪಿ ಹಾಕಿರೋದು ಗೊತ್ತಾಗಿದೆ. ಅವರಿಂದ ಹಣ ಸುಲಿಗೆ ಮಾಡಿ, ಹವಾಲಾ ಮೂಲಕವೋ ಬಿಟ್ ಕಾಯಿನ್ ಮೂಲಕವೋ ಅಥವಾ ಇತರೆ ಮಾರ್ಗಗಳ ಮೂಲಕ ಅಕ್ರಮ ಹಣ ಸಾಗಣೆ ದಂಧೆ ನಡೆಸುತ್ತಿದ್ದ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಪೊಲೀಸರಿಗೆ ಸಿಕ್ಕಿವೆ. ಈ ನಿಟ್ಟಿನಲ್ಲಿ ಎಫ್​ಬಿಐ ಜೊತೆ ಸೇರಿ ಜಂಟಿ ತನಿಖೆ ನಡೆಸಲು ಅಹಮದಾಬಾದ್ ಪೊಲೀಸರು ಮುಂದಾಗಿದ್ದಾರೆ.