ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 76 ಕ್ವಿಂಟಲ್ ಪಡಿತರ ಅಕ್ಕಿ ವಶಕ್ಕೆ..!

ಬಳ್ಳಾರಿ: ಜಮೀನೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 76 ಕ್ವಿಂಟಲ್ ಪಡಿತರ ಅಕ್ಕಿಯನ್ನು ತಹಶೀಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತ್ಯಾಗದಾಳ ಹಾಗೂ ದೇವರ ಮಲ್ಲಾಪುರ ಮಧ್ಯೆ ಇರುವ ದೊಡ್ಡಮಲ್ಲಯ್ಯ ಎಂಬುವವರಿಗೆ ಸೇರಿದ ಜಮೀನಲ್ಲಿರುವ ಆಶ್ರಮವೊಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಶೇಖರಿಸಿ ಇಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಂಡೂರು ತಹಶೀಲ್ದಾರ್ ಎಚ್.ಎಂ. ರಮೇಶ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸುಮಾರು 76 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಇನ್ನು ದೊಡ್ಡಮಲ್ಲಯ್ಯ, ಸಣ್ಣ ಚಿತ್ತಪ್ಪ ಸೇರಿದಂತೆ ಐವರು ಬೇರೆ ಬೇರೆ ಪ್ರದೇಶಗಳಿಂದ ಈ ಪಡಿತರ ಅಕ್ಕಿಯನ್ನು ತಂದು ಮಾರಾಟಕ್ಕಾಗಿ ಈ ಆಶ್ರಮದಲ್ಲಿ ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಈ ಕುರಿತಂತೆ ಐವರ ಮೇಲೆ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv