ಇಲ್ಲಿ ಊಟ ಪೂರ್ತಿ ತಿನ್ನಬೇಕು, ಇಲ್ಲದಿದ್ರೆ ₹50 ದಂಡ..!

ತೆಲಂಗಾಣ​: ಊಟ, ಅದೆಷ್ಟೋ ಜನಕ್ಕೆ ಒಂದು ಹೊತ್ತಿನ ಊಟದ ಸಮಸ್ಯೆ ಇದೆ ಅನ್ನೋ ಸುದ್ದಿಯನ್ನ ಆಗಾಗ ಓದ್ತಾ, ನೋಡ್ತಾ ಇರ್ತೀವಿ. ಅದಕ್ಕೆ ಊಟವನ್ನ ಯಾರೂ ವೇಸ್ಟ್ ಮಾಡಬಾರದು ಅನ್ನೋ ಜಾಗೃತಿ ಮೂಡಿಸಲಾಗುತ್ತಿದೆ. ಆದ್ರೂ ಅನ್ನ ವೇಸ್ಟ್ ಮಾಡೋದು ತಪ್ಪಿಲ್ಲ. ಪ್ರತಿನಿತ್ಯ ಅದೆಷ್ಟೋ ಜನರ ಹಸಿವು ನೀಗಿಸಬಹುದಾದಷ್ಟು ಊಟ ವೇಸ್ಟ್ ಆಗ್ತಾನೆ ಇದೆ. ಅದರಲ್ಲೂ ಹೋಟೆಲ್, ಮದುವೆ ಮುಂತಾದ ಸಮಾರಂಭಗಳಲ್ಲಂತೂ ಈ ವೇಸ್ಟೇಜ್ ಸ್ವಲ್ಪ ಹೆಚ್ಚೇ ಆಗುತ್ತೆ.
ಆದ್ರೆ, ತೆಲಂಗಾಣದಲ್ಲಿರುವ ಈ ಹೋಟೆಲ್​ನಲ್ಲಿ ಮಾತ್ರ ಅದಕ್ಕೆ ಚಾನ್ಸ್ ಇಲ್ಲ. ಇದಕ್ಕೆ ಕಾರಣ ಆ ಹೋಟೆಲ್​ನಲ್ಲಿ ಹಾಕಿರುವ ಒಂದು ಬೋರ್ಡ್. ಸಾಮಾನ್ಯವಾಗಿ ಹೋಟೆಲ್​ಗಳ ಎದುರು ಸ್ವಾಗತ ಅನ್ನೋ ಬೋರ್ಡ್​ಗಳನ್ನೋ, ಹೋಟೆಲ್​ನ ಸ್ಪೆಷಾಲಿಟಿ ಹೇಳುವ ಬೋರ್ಡ್ ಅನ್ನೋ ಹಾಕಿರುತ್ತಾರೆ. ಆದ್ರೆ ತೆಲಂಗಾಣದ ವರಂಗಲ್​ನಲ್ಲಿರುವ ಕೇದಾರಿ ಹೋಟೆಲ್​ನಲ್ಲಿ ಮಾತ್ರ ಸ್ಪೆಷಲ್ ಬೋರ್ಡ್ ಒಂದು ಹಾಕಲಾಗಿದೆ. ಇದು ಬೋರ್ಡ್ ಅನ್ನೋದಕ್ಕಿಂತಲೂ ಕೇದಾರಿ ಹೋಟೆಲ್​ನಲ್ಲಿ ಪಾಲಿಸಲೇಬೇಕಾದ ಸ್ಟ್ರಿಕ್ಟ್ ರೂಲ್. ಇಲ್ಲದಿದ್ರೆ ಫೈನ್ ಬೀಳೋದು ಗ್ಯಾರಂಟಿ.

ಅಷ್ಟಕ್ಕೂ ಆ ಬೋರ್ಡ್ ಏನಂದ್ರೆ, ಆಹಾರ ಬಿಸಾಡಿದರೆ ದಂಡ ಹಾಕಲಾಗುತ್ತದೆ. ಕೇದಾರಿ ಹೋಟೆಲ್​ನಲ್ಲಿ ಇಂಥದ್ದೊಂದು ಬೋರ್ಡ್ ಕಾಣಿಸುತ್ತೆ. ಲಿಂಗಲ ಕೇದಾರಿ ಅನ್ನೋರ ಈ ಹೋಟೆಲ್​ನಲ್ಲಿ ನೋ ಫುಡ್ ವೇಸ್ಟ್ ಪಾಲಿಸಿಯನ್ನ ಕಳೆದ ಎರಡು ವರ್ಷಗಳಿಂದ ಪಾಲಿಸಲಾಗುತ್ತಿದೆ. ಊಟ ಮಾಡೋಕೆ ಬಂದೋರು ಹೊಟ್ಟೆ ತುಂಬಾ ಊಟ ಮಾಡಿ ಬಿಲ್ ಕೊಟ್ಟು ಹೋದ್ರೆ ಸಾಕು. ಆದ್ರೆ, ನಾನು ಇಷ್ಟನ್ನೂ ತಿಂತೀನಿ ಅಂತ ಹೆಚ್ಚಿಗೆ ತರಿಸಿಕೊಂಡು, ಅದನ್ನ ವೇಸ್ಟ್ ಮಾಡೋ ಹಾಗಿಲ್ಲ. ತಪ್ಪಿ ವೇಸ್ಟ್ ಮಾಡಿದ್ರೋ, ಅವರಿಗೆ 50 ರೂಪಾಯಿ ದಂಡ ಹಾಕಲಾಗುತ್ತೆ.

ಕಳೆದ ಎರಡು ವರ್ಷಗಳಿಂದ ಹೀಗೆ ಆಹಾರ ವೇಸ್ಟ್ ಮಾಡಿದವರಿಂದ ದಂಡದ ರೂಪದಲ್ಲಿ ವಸೂಲಿ ಮಾಡಿರುವ ಹಣ ಬರೊಬ್ಬರಿ 14 ಸಾವಿರ ರೂಪಾಯಿ. ಈ ಹಣವನ್ನ ಅನಾಥ ಆಶ್ರಮಕ್ಕೆ ನೀಡಲಾಗ್ತಿದೆ. ಇನ್ನು, ಲಿಂಗಲ ಕೇದಾರಿ ತಮ್ಮ ಹೋಟೆಲ್​ನಲ್ಲಿ ನೋ ಫುಡ್ ವೇಸ್ಟ್ ಪಾಲಿಸಿ ಅಳವಡಿಸಿದ ಮೇಲೆ ಆಹಾರವನ್ನ ಬಿಸಾಡುವವರ ಸಂಖ್ಯೆ ಕೂಡ ದಿನೇ ದಿನೆ ಹೆಚ್ಚಾಗ್ತಿದೆಯಂತೆ. ಜೊತೆಗೆ ಬ್ಯುಸಿನೆಸ್ ಕೂಡ ಚೆನ್ನಾಗಿಯೇ ನಡೀತಿದೆ ಅಂತಾರೆ ಕೇದಾರಿ.