‘ಕಾಂಗ್ರೆಸ್​​​ನಲ್ಲಿ ಸ್ಥಾನಮಾನ ಕೇಳಿದ್ರೆ ಗ್ಲಾಮರಸ್​ ಆಗಿರ್ಬೇಕು ಅಂತಾರೆ’

ಧಾರವಾಡ: ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡನೊಬ್ಬ ನನ್ನ ಮೈ ಮುಟ್ಟಲು ಬಂದಿದ್ದ ಎಂದು ಕಾಂಗ್ರೆಸ್​​​ನ ಕಾರ್ಯಕರ್ತೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ನಡೆದ ಚುನಾವಣೆ ಒಳಗೆ-ಹೊರಗೆ ಎಂಬ ಕಾರ್ಯಕ್ರಮದಲ್ಲಿ ಅನಿತಾ ಗುಂಜಾಳ ಎಂಬ ಕಾರ್ಯಕರ್ತೆ, ಪಕ್ಷದಲ್ಲಿ ಕೆಲಸ ಮಾಡುವ ನಾವು ಸೂಕ್ತ ಸ್ಥಾನಮಾನ ಕೊಡಿ ಎಂದರೆ ನೀವು ಗ್ಲಾಮರಸ್​ ಆಗಿದ್ದರೆ ಮಾತ್ರ ಸ್ಥಾನಮಾನ ಅಂತ ಮುಖಂಡರೆ ಹೇಳುತ್ತಾರೆ. ಗ್ಲಾಮರಸ್​ ಅಂದರೆ ಏನರ್ಥ ? ಗ್ಲಾಮರಸ್​ ​ ಆಗಿದ್ದವರು ಮಾತ್ರ ಗೆಲ್ಲುತ್ತಾರೆ ಎಂದು ಹೇಳ್ತಾರೆ. ಈ ಮಾತನ್ನು ಕೇಳಿ ಎದೆ ಝಲ್​ ಅನ್ನುತ್ತದೆ. ಇವರ ಪ್ರಕಾರ ಇಂದಿರಾ ಗಾಂಧಿ ಗ್ಲಾಮರಸ್​ ಆಗಿದ್ದರಾ? ಕಿತ್ತೂರು ಚೆನ್ನಮ್ಮ ,ಒನಕೆ ಓಬವ್ವಾ ಗ್ಲಾಮರಸ್​ ಆಗಿದ್ದರಾ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೋಟಮ್ಮ ಮುಂದೆ ಸುರಿಸಿದ್ದಾರೆ.
ನಗರದ ವಿದ್ಯಾವರ್ಧಕ‌ ಸಂಘದಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿರುವ ‘ಚುನಾವಣೆ: ಒಳ ಹೊರಗೆ’ ಎಂಬ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮ ಭಾಗಿಯಾಗಿದ್ದರು. ಅವರ ಸಮಕ್ಷಮದಲ್ಲೇ ಅನಿತಾ ಗುಂಜಾಳ ಈ ವಿಷಯ ಪ್ರಸ್ತಾಪಿಸಿದ್ದು, ಕಾಂಗ್ರೆಸ್​ನಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ. ಪಕ್ಷದಲ್ಲಿ ಮಹಿಳೆಯರನ್ನು ತುಚ್ಛವಾಗಿ ಕಾಣುತ್ತಾರೆ ಎಂದು ಹೇಳಿದ್ದಾರೆ.
ಪಕ್ಷದಲ್ಲಿರುವ ನಮ್ಮ ನಾಯಕರ ಪರ ಕೆಲಸ ಮಾಡುವಾಗ ಈ ರೀತಿ ಕೀಳಾಗಿ ಕಾಣುತ್ತಾರೆ. ಕೆಲ ಸಮಯದಲ್ಲಿ ರಾತ್ರಿ ವೇಳೆನೂ ಪಕ್ಷದ ಕೆಲಸ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸುವ ಕೆಲ ದುರುಳರು ಪಕ್ಷದಲ್ಲಿದ್ದಾರೆ ಅಂತಾ ಮೋಟಮ್ಮ ಎದುರು ಅನಿತಾ ಗುಂಜಾಳ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಾರ್ಯಕರ್ತೆಯ ಮಾತಿಗೆ ಮೋಟಮ್ಮ ಪ್ರತಿಕ್ರಿಯೆ

ಇನ್ನು ಕಾರ್ಯಕರ್ತೆಯ ಅಳಲಿಗೆ ಪ್ರತಿಕ್ರಿಯೆ ನೀಡಿದ ಮೋಟಮ್ಮ, ಎಷ್ಟೋ ಸಲ ಪುರುಷ ನಾಯಕರು ಇರುವ ವೇದಿಕೆಯಲ್ಲಿ, ನಾನು ಸೇರಿದಂತೆ ರಾಣಿ ಸತೀಶ್, ಮಾರ್ಗರೇಟ್ ಆಳ್ವಾರಂತ ಹಿರಿಯರಿದ್ದರೂ ನಮ್ಮನ್ನು ವೇದಿಕೆ ಮೇಲೆ ಕೂರಿಸಿಕೊಳ್ಳುವುದಿಲ್ಲ. ಈ ರೀತಿಯಲ್ಲಿ ಮಹಿಳೆಯರಿಗೆ ಗೌರವ ಕೊಡುವವರೂ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಪಕ್ಷದಲ್ಲಿ ಹಾಗೇನಾದ್ರೂ ಮಹಿಳೆಯರಿಗೆ ಅಗೌರವ ತೋರಿಸಿದರೆ ಪ್ರಚಾರಕ್ಕೆ ಹೋಗುವುದನ್ನೆ ನಿಲ್ಲಿಸಿಬಿಡಬೇಕು ಎಂದು ಸಲಹೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv