‘ದೇಶಪಾಂಡೆ ಅವರು ನನ್ನ ತಂದೆ ಇದ್ದಂತೆ, ಅವರು ಮಕ್ಕಳಿಗೆ ಯಜಮಾನಿಕೆ ಕೊಡಲ್ವಾ?’

ಶಿರಸಿ: ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ನಾನು ಮೈತ್ರಿ ಸರ್ಕಾರದಲ್ಲೇ ಮಂತ್ರಿಯಾಗುತ್ತೇನೆ. ಸಚಿವ ದೇಶಪಾಂಡೆಯವರೇ ಯಜಮಾನಿಕೆ ವಹಿಸಿ ಇದನ್ನು ಕಾರ್ಯರೂಪಕ್ಕೆ ತರುತ್ತಾರೆ ಅಂತಾ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಹೇಳಿದರು.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲೋ ಒಂದು ಕಡೆ ಅಸಮಾಧಾನ, ಭಿನ್ನಾಭಿಪ್ರಾಯ ಇದ್ದೇ ಇದೆ. ಆದರೆ, ಸರ್ಕಾರವನ್ನು ಬೀಳಿಸುವಷ್ಟು ಭಿನ್ನಾಭಿಪ್ರಾಯ ಇಲ್ಲ. ಹಾಗಾಗಿ ನಾನು ಬಿಜೆಪಿ ಸೇರುತ್ತೇನೆ ಅನ್ನೋದು ಒಂದು ಊಹಾಪೋಹ ಎಂದು ಶಿವರಾಂ ಹೆಬ್ಬಾರ್ ಸ್ಪಷ್ಟಪಡಿಸಿದರು.

ದೇಶಪಾಂಡೆ ಅವರು ನನ್ನ ತಂದೆ ಇದ್ದಂತೆ?
ನಾನು ಮೈತ್ರಿ ಸರ್ಕಾರದಲ್ಲೇ ಅದೂ ಕಾಂಗ್ರೆಸ್ ಕೋಟಾದಲ್ಲೇ ಮಂತ್ರಿ ಆಗುತ್ತೇನೆ. ನಮ್ಮ ತಂದೆ ಸಮಾನರಾದ ದೇಶಪಾಂಡೆಯವರೇ ಇದನ್ನು ನಡೆಸಿಕೊಡುತ್ತಾರೆ. ಮಕ್ಕಳಾದ ನಮ್ಮನ್ನು ತಿದ್ದಿ ಸರಿಯಾದ ಮಾರ್ಗ ತೋರಿಸುತ್ತಾರೆ. ತಂದೆಯಾದವರು ಮಕ್ಕಳಿಗೆ ಯಜಮಾನಿಕೆ ಕೊಟ್ಟು ಹೇಗೆ ಜವಾಬ್ದಾರಿ ನಿರ್ವಹಿಸುತ್ತಾರೆ ಅನ್ನೋದನ್ನು ನೋಡೋದಿಲ್ವಾ ಎಂದು ಪ್ರಶ್ನಿಸುವ ಮೂಲಕ ಶಿವರಾಂ ಹೆಬ್ಬಾರ್ ಅಚ್ಚರಿ ಮೂಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv