ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸದಕ್ಕೆ ನನಗೆ ದುಪ್ಪಟ್ಟು ನೋವಾಗಿದೆ: ಜಮೀರ್​

ತುಮಕೂರು: ಕನ್ನಡ ಕಲಿಯದೇ ಇದ್ದದ್ದು ನನ್ನ ದುರಾದೃಷ್ಟ. ತಂದೆ ತಾಯಿ ನನಗೆ ಕನ್ನಡ ಶಾಲೆಗೆ ಸೇರಿಸಲಿಲ್ಲ. ಕನ್ನಡ ಶಾಲೆಯಲ್ಲಿ ಓದದೇ ಇರುವುದರಿಂದಾಗಿ ನನಗೆ ಭಾಷಾ ಸಮಸ್ಯೆ ಎದುರಾದ ಪರಿಣಾಮ ನಾನು ಪ್ರಮಾಣ ವಚನವನ್ನು ಇಂಗ್ಲೀಷ್​ನಲ್ಲಿ ಸ್ವೀಕರಿಸಿದೆ ಎಂದು ನಾಗರೀಕ ಸರಬರಾಜು ಮತ್ತು ವಕ್ಫ್​​ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಇಂಗ್ಲೀಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ರಾಜ್ಯದ ಜನತೆಗಿಂತ‌ ದುಪ್ಪಟ್ಟು ನನಗೆ ನೋವಾಗಿದೆ ಎಂದು ಸಚಿವ ಜಮೀರ್​ ಅಹ್ಮದ್​ ಹೇಳಿದರು.

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆ ಬಳಿಕ ಮೊದಲ ಬಾರಿಗೆ ಇಂದು ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ​ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಬಳಿಕ ಮಾತನಾಡಿದ ಸಚಿವ ಜಮೀರ್​, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಿಕ್ಕಿದ್ದು ಸಂತೋಷವಾಗಿದೆ. ಐದು ವರ್ಷದಲ್ಲಿ ನನ್ನ ಖಾತೆಯಲ್ಲಿ ಉತ್ತಮ ಕೆಲಸ ಮಾಡಿ ಇತಿಹಾಸ ಸೃಷ್ಟಿಸುತ್ತೇನೆ ಎಂದು ಹೇಳಿದ್ರು.
ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್​ ವರಿಷ್ಠ ದೇವೇಗೌಡರ ಮಾತು ಕೇಳುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ದೇವೇಗೌಡರ ಮಾತು ಕೇಳುವುದು ತಪ್ಪಿಲ್ಲ. ರಾಜ್ಯದ ಸಮಸ್ಯೆ ಇದ್ದಾಗ ದೇವೇಗೌಡರ ಮಾತು ಕೇಳಬೇಕಾಗುತ್ತದೆ. ಅವರು ಪ್ರಧಾನಿಯಾಗಿದ್ದವರು. ಖಾತೆ ಹಂಚಿಕೆಯಲ್ಲಿ ದೇವೇಗೌಡರಾಗಲಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಭಾವ ಬೀರಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv