ಅಂದು ಫಾಸ್ಟ್​ ಬೌಲರ್..ಇಂದು ಸೂಪರ್ ಸಿಂಗರ್..!

ಹೆನ್ರಿ ಓಲೋಂಗ ಅಂತಾ ಹೆಸರು ಕೇಳಿದ್ರೆ ಭಾರತದ ಯಾವುದೇ ಕ್ರಿಕೆಟ್​ ಪ್ರೇಮಿಗಳಿಗೂ ಆ ಮ್ಯಾಚ್ ನೆನಪಾಗಿಬಿಡುತ್ತೆ. ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಸಚಿನ್​ ತೆಂಡೂಲ್ಕರ್ ವಿಕೆಟ್​ ತೆಗೆದು ಸಿಕ್ಕಾ ಪಟ್ಟೆ ಬೀಗಿದ್ದ ಓಲೋಂಗರನ್ನು, ನಂತರದ ಮ್ಯಾಚ್​ನಲ್ಲಿಯೇ ಸಚಿನ್​ ಸಿಕ್ಕಾಪಟ್ಟೆ ಥಳಿಸಿ ಬಿಟ್ಟಿದ್ರು. ಹೌದು ಅದೇ ಓಲೋಂಗ ಈಗ ಸಿಂಗರ್​.! ಆಶ್ಚರ್ಯವಾದ್ರೂ ಸತ್ಯ ಇದು.

ಅಷ್ಟಕ್ಕೂ ವಿಷಯ ಏನಪ್ಪ ಅಂದ್ರೆ, ರಾಜಕೀಯದಿಂದ ಕ್ರಿಕೆಟ್ ತ್ಯಜಿಸಿದ್ದ ಜಿಂಬಾಬ್ವೆ ತಂಡದ ಮಾಜಿ ವೇಗಿ ಹೆನ್ರಿ ಓಲೋಂಗ, ಇದೀಗ ‘ದಿ ವಾಯ್ಸ್​ ಆಸ್ಟ್ರೇಲಿಯಾ’ ಸಿಂಗಿಂಗ್ ಕಾಂಪಿಟೇಷನ್​ನಲ್ಲಿ ಆಡಿಷನ್ ಕೊಟ್ಟಿದ್ದಾರೆ. ಮೊದಲ ಸುತ್ತಿನಲ್ಲಿ ‘ ದಿಸ್ ಇಸ್ ದಿ ಮೂಮೆಂಟ್’ ಅನ್ನೋ ಹಾಡನ್ನ ಹಾಡಿದ ಓಲೋಂಗ, ಜಡ್ಜ್​​ಗಳನ್ನ ಇಂಪ್ರೆಸ್ ಮಾಡಿ, ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಕ್ರಿಕೆಟ್​ನಿಂದ ದೂರ ಉಳಿದ ಬಳಿಕ ಅದೆಷ್ಟೋ ಹಾಡುಗಳನ್ನ ಹಾಡಿದ್ದ ಓಲೋಂಗ, ಗಾಯಕನಾಗಿ ಸೆಕೆಂಡ್ ಇನ್ನಿಂಗ್ಸ್​ ಆರಂಭಿಸಲು ನಿರ್ಧರಿಸಿದ್ದಾರೆ. ಓಲೋಂಗರ ಈ ಟ್ಯಾಲೆಂಟ್ ನೋಡಿ ಆಸ್ಟ್ರೇಲಿಯಾ ತಂಡದ ಮಾಜಿ ಕೋಚ್ ಮತ್ತು ಆಟಗಾರ ಡ್ಯಾರೆನ್ ಲೆಹ್ಮನ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್​ರೌಂಡರ್ ಶಾನ್ ಪೊಲ್ಲಾಕ್ ಫುಲ್ ಫಿದಾ ಆಗಿದ್ದಾರೆ.

ಓಲೋಂಗ ಕ್ರಿಕೆಟ್ ತ್ಯಜಿಸಿದ್ದು ಯಾಕೆ..?

2003ರ ಏಕದಿನ ವಿಶ್ವಕಪ್​ನಲ್ಲಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಓಲೋಂಗ ಮತ್ತು ಌಂಡಿ ಫ್ಲವರ್, ಅಧ್ಯಕ್ಷ ರಾಬರ್ಟ್ ಮುಗಾಬೆ ವಿರುದ್ಧ ಪ್ರತಿಭಟನೆ ನಡೆಸಿದ್ರು. ಅಷ್ಟೇ ಅಲ್ಲ, ಜಿಂಬಾಬ್ವೆಯಲ್ಲಿ ಪ್ರಜಾಪ್ರಭುತ್ವ ಕೊಲೆಯಾಗಿದೆ ಅಂತ ಮೌನಾಚರಣೆ ಸಹ ಆಚರಿಸಿದ್ರು. 2003ರ ವಿಶ್ವಕಪ್​ ನಂತರ ಕೊಲೆ ಬೆದರಿಕೆಯಿಂದ ಓಲೋಂಗ, ಜಿಂಬಾಬ್ವೆ ದೇಶವನ್ನ ತೊರೆಯಬೇಕಾಯ್ತು. ಬ್ರಿಟನ್​ನಲ್ಲಿ 12 ವರ್ಷಗಳ ಕಾಲ ವಾಸವಿದ್ದ ಮಾಜಿ ವೇಗಿ, ನಂತರ ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ಇಬ್ಬರು ಪುತ್ರಿಯರು ಮತ್ತು ಪತ್ನಿ ಜೊತೆ ವಾಸವಾಗಿದ್ದಾರೆ. ಜಿಂಬಾಬ್ವೆ ತಂಡವನ್ನ ಪ್ರತಿನಿಧಿಸಿದ ಮೊದಲ ಬ್ಲ್ಯಾಕ್ ಕ್ರಿಕೆಟರ್ ಎನಿಸಿಕೊಂಡಿರೋ ಓಲೋಂಗ, 30 ಟೆಸ್ಟ್ ಮತ್ತು 50 ಏಕದಿನ ಪಂದ್ಯಗಳಲ್ಲಿ ಒಟ್ಟು 126 ವಿಕೆಟ್ ಕಬಳಿಸಿ ಸಾಧನೆ ಮಾಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv