ನಾನು ಜ್ಯೋತಿಷ್ಯವನ್ನು ನಂಬೋದಿಲ್ಲ: ಸಚಿವ ಶಿವಾನಂದ ಪಾಟೀಲ್

ಬಾಗಲಕೋಟೆ: ನಾನು ಜ್ಯೋತಿಷ್ಯವನ್ನು ನಂಬೋದಿಲ್ಲ, ಆದ್ದರಿಂದ ಈ ಬಗ್ಗೆ ಕಾಮೆಂಟ್ ಮಾಡೋದಿಲ್ಲ ಅಂತಾ ರಂಭಾಪುರಿ ಶ್ರೀಗಳ ಹೇಳಿಕೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಯಡಿಯೂರಪ್ಪ ಸಿಎಂ ಅಗೋದಿದ್ದರೆ, ಎಂದೋ ಆಗುತ್ತಿದ್ದರು. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲ್ಲ ಎನ್ನುವ ಸಲುವಾಗಿ ಸಮ್ಮಿಶ್ರ ಸರ್ಕಾರ ಆಗಿದ್ದು ಎಂದು ಸಚಿವರು ಕುಟುಕಿದರು. ಸಮ್ಮಿಶ್ರ ಸರ್ಕಾರದಲ್ಲಿನ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಎಲ್ಲರೂ ಅಧಿವೇಶನದಲ್ಲಿ ನಮ್ಮ ಜೊತೆ ಕುಳಿತುಕೊಳ್ಳುತ್ತಾರೆ. ಮಾಧ್ಯಮದವರು ಸುದ್ದಿಗಳನ್ನು ಸೃಷ್ಟಿ ಮಾಡೋದನ್ನ ನಿಲ್ಲಿಸಬೇಕು. ಯಾರೋ ಹೇಳಿದ್ದನ್ನ ದೊಡ್ಡ ವಿಷಯವನ್ನಾಗಿ ಮಾಡ್ತೀರಿ. ಒಬ್ಬ ಹೇಳಿದ್ದನ್ನ ಇಪ್ಪತ್ತು ಮಂದಿಗೆ ಹೋಲಿಸುತ್ತೀರಿ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು.
‘ಒಟ್ಟಿಗೇ ಲೋಕಸಭಾ ಚುನಾವಣೆ ಎದುರಿಸುತ್ತೇವೆ’
ಸಮ್ಮಿಶ್ರ ಸರ್ಕಾರ ಇರೋದ್ರಿಂದ ಒಟ್ಟಿಗೇ ಚುನಾವಣೆ ಎದುರಿಸುತ್ತೇವೆ. ಸೀಟು ಹಂಚಿಕೆ ಬಗ್ಗೆ ಹಿರಿಯರು ನಿರ್ಧರಿಸುತ್ತಾರೆ ಎಂದು ಲೋಕಸಭಾ ಚುನಾವಣೆಯ ಮೈತ್ರಿಯ ಕುರಿತು ತಿಳಿಸಿದರು. ನೀರಾವರಿ ಯೋಜನೆ ಬಗ್ಗೆ ನನಗೆ ನೋವಿದೆ. ಕಾಲಬದ್ಧವಾಗಿ ಮುಗಿದಿದ್ರೆ ರಾಜ್ಯಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಇದು ಹಿಂದಿನ ಎಲ್ಲ ಸರ್ಕಾರಗಳು ಮಾಡಿದ ತಪ್ಪು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಎಂದು ನಾನು ಹೇಳೋದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಯುಕೆಪಿ ಸಂತ್ರಸ್ತರ ಕುರಿತು ಮಾತನಾಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv